ಟೆಸ್ಟ್ ಕ್ರಿಕೆಟ್: ಅತ್ಯಂತ ವೇಗವಾಗಿ ಸಾವಿರ ರನ್ ಪೂರೈಸಿದ 3ನೇ ಬ್ಯಾಟ್ಸ್‌ಮನ್ ಮಯಾಂಕ್
ಅಡಿಲೇಡ್: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಟೆಸ್ಟ್ ಕ ಕ್ರಿಕೆಟ್‌ನಲ್ಲಿ ವಿನೋದ್ ಕಾಂಬ್ಲಿ ಹಾಗೂ ಚೇತೇಶ್ವರ ಪೂಜಾರ ಬಳಿಕ ವೇಗವಾಗಿ 1,000 ರನ್ ಗಳಿಸಿದ ಭಾರತದ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾದರು. ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಲಿ ಕೇವಲ 14 ಇನಿಂಗ್ಸ್‌ನಲ್ಲಿ ಸಾವಿರ ರನ್ ಪೂರೈಸುವುದರೊಂದಿಗೆ ವೇಗವಾಗಿ ಸಾವಿರ ಟೆಸ್ಟ್ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪೂಜಾರ ಹಾಗೂ ಸುನೀಲ್ ಗವಾಸ್ಕರ್ ಕ್ರಮವಾಗಿ 18ನೇ ಹಾಗೂ 21ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಮಯಾಂಕ್ ತಾನಾಡಿದ 12ನೇ ಟೆಸ್ಟ್ ಪಂದ್ಯದ 18ನೇ ಇನಿಂಗ್ಸ್‌ನಲ್ಲಿ 1,000 ರನ್ ಪೂರೈಸಿದರು.
ಮಯಾಂಕ್ ತನ್ನ ವೃತ್ತಿಜೀವನದ ಅಲ್ಪ ಸಮಯದಲ್ಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯ ತೋರಿದ್ದು, 29ರ ಹರೆಯದ ಮಯಾಂಕ್ ಎರಡು ಬಾರಿ ದ್ವಿಶತಕ ಗಳಿಸಿದ್ದಾರೆ. ಇದರಲ್ಲಿ ಗರಿಷ್ಟ ವೈಯಕ್ತಿಕ ಸ್ಕೋರ್ 243 ರನ್ ಕೂಡ ಸೇರಿದೆ.