ದೇಲಂಪಾಡಿ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ : ಕಲಾ ಸಂಘ ‘ಶ್ರೀ ವಿಶ್ವೇಶ ತೀರ್ಥ’ ಪ್ರಶಸ್ತಿಗೆ ಆಯ್ಕೆ
ಉಡುಪಿ, ಡಿ.19: ಯಕ್ಷಗಾನ ಕಲಾರಂಗ ಉಡುಪಿ ಸಂಸ್ಥೆ, ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಹೆಸರಿನಲ್ಲಿ ನೀಡುತ್ತಾ ಬಂದ ಪ್ರಶಸ್ತಿಗೆ ಈ ಬಾರಿ ಯಕ್ಷಗಾನ ಸಂಶೋಧನೆ, ಪ್ರದರ್ಶನ, ಕಾರ್ಯಗಾರಗಳ ಮೂಲಕ ನಿರಂತರ ಕ್ರಿಯಾಶೀಲವಾಗಿರುವ ಕಾಸರಗೋಡಿನ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ಆಯ್ಕೆಯಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಡಿ.26ರ ಶನಿವಾರ ಸಂಜೆ 5: 00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉಪಸ್ಥಿತರಿರುವರು.
ಪ್ರಶಸ್ತಿಯು 50,000ರೂ. ನಗದು ಬಹುಮಾನವನ್ನು ಒಳಗೊಂಡಿದೆ ಎಂದು ಯಕ್ಷಗಾನ ಕಲಾರಂಗ ತಿಳಿಸಿದೆ.
ವಿದ್ವಾಂಸ ಗಣೇಶ ಕೊಲೆಕಾಡಿಗೆ ಪ್ರಶಸ್ತಿ: ಯಕ್ಷಗಾನ ಕಲಾರಂಗ ಯಕ್ಷ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿಗೆ ಈ ಬಾರಿ ಪ್ರಸಂಗಕರ್ತ, ಛಾಂದಸ, ಕಲಾವಿದ ಗಣೇಶ ಕೊಲೆಕಾಡಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಡಿ.25ರ ಶುಕ್ರವಾರ ಸಂಜೆ 5:00 ಗಂಟೆಗೆ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹಿಸಲಿದ್ದಾರೆ. ಪ್ರಶಸ್ತಿಯು 40,000ರೂ. ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ ಎಂದು ಎಂದು ಯಕ್ಷಗಾನ ಕಲಾರಂಗ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.