ಪ್ರಜ್ಞಾ ಠಾಕೂರ್ ಏಮ್ಸ್ ಗೆ ದಾಖಲು: ಮಾಲೆಗಾಂವ್ ಸ್ಫೋಟ ಪ್ರಕರಣ ವಿಚಾರಣೆಗೆ ಎರಡನೇ ಬಾರಿ ಗೈರು

Update: 2020-12-19 17:55 GMT

ಮುಂಬೈ,ಡಿ.19: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಶನಿವಾರ ಈ ತಿಂಗಳಲ್ಲಿ ಎರಡನೇ ಬಾರಿಗೆ ಇಲ್ಲಿಯ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲರಾಗಿದ್ದಾರೆ.

 ಠಾಕೂರ್ ಕಳೆದ ಎಪ್ರಿಲ್‌ನಿಂದಲೂ ದಿಲ್ಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದ ಅವರು ವೈದ್ಯರ ಸಲಹೆಯ ಮೇರೆಗೆ ಅಲ್ಲಿ ದಾಖಲಾಗಿರುವುದ ರಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಅವರ ಪರ ವಕೀಲ ಜೆ.ಪಿ.ಮಿಶ್ರಾ ತಿಳಿಸಿದರು.

ಪ್ರಕರಣದಲ್ಲಿಯ ಇನ್ನೋರ್ವ ಆರೋಪಿ ಸುಧಾಕರ ಚತುರ್ವೇದಿ ಕೂಡ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಇತರ ಐವರು ಆರೋಪಿಗಳಾದ ಲೆ.ಕ.ಪ್ರಸಾದ ಪುರೋಹಿತ,ರಮೇಶ ಉಪಾಧ್ಯಾಯ,ಸಮೀರ ಕುಲಕರ್ಣಿ,ಅಜಯ ರಾಹಿಕರ್ ಮತ್ತು ಸುಧಾಕರ ದ್ವಿವೇದಿ ಅವರು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.

ಇಬ್ಬರು ಆರೋಪಿಗಳ ಗೈರುಹಾಜರಾತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾ.ಪಿ.ಆರ್.ಸಿತ್ರೆ ಅವರು ಜ.4ರಂದು ನ್ಯಾಯಾಲಯದಲ್ಲಿ ಹಾಜರಾಗುವಂತೆ ಎಲ್ಲ ಆರೋಪಿಗಳಿಗೆ ನಿರ್ದೇಶ ನೀಡಿದರು.

ಕೊರೋನ ವೈರಸ್ ಲಾಕ್‌ಡೌನ್ ಬಳಿಕ ಕಳೆದ ತಿಂಗಳು ತನ್ನ ಕಲಾಪಗಳನ್ನು ಪುನರಾರಂಭಿಸಿದ್ದ ನ್ಯಾಯಾಲಯವು ಡಿ.3ರಂದು ತನ್ನೆದುರು ಹಾಜರಾಗುವಂತೆ ಎಲ್ಲ ಆರೋಪಿಗಳಿಗೆ ಆದೇಶಿಸಿತ್ತು. ಆದರೆ ಠಾಕೂರ್ ಸೇರಿದಂತೆ ಹೆಚ್ಚಿನ ಆರೋಪಿಗಳು ಕೋವಿಡ್-19 ನೆಪದಲ್ಲಿ ಹಾಜರಾಗುವುದರಿಂದ ತಪ್ಪಿಸಿಕೊಂಡಿ ದ್ದರು.

2008,ಸೆ.29ರಂದು ಮಾಲೆಗಾಂವ್‌ನ ಮಸೀದಿಯೊಂದರ ಸಮೀಪ ಬೈಕೊಂದರಲ್ಲಿ ಇರಿಸಿದ್ದ ಬಾಂಬ್ ಸ್ಫೋಟಗೊಂಡು ಆರು ಜನರು ಮೃತಪಟ್ಟಿದ್ದರು ಮತ್ತು 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News