“ಆಕೆ ಸಾವಿಗೂ ಮುಂಚೆ ನೀಡಿದ್ದ ಹೇಳಿಕೆ ವ್ಯರ್ಥವಾಗಲಿಲ್ಲ”

Update: 2020-12-19 15:19 GMT

ಹೊಸದಿಲ್ಲಿ,ಡಿ.19: “ಆಕೆಯ ಮರಣಪೂರ್ವ ಹೇಳಿಕೆ ವ್ಯರ್ಥವಾಗಲಿಲ್ಲ”; ಇದು ಸಿಬಿಐ ಶುಕ್ರವಾರ ಹತ್ರಸ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ ಬಳಿಕ ಸಂತ್ರಸ್ತೆಯ ಅತ್ತಿಗೆ ಕಣ್ತುಂಬ ನೀರು ತುಂಬಿಕೊಂಡು ಹೇಳಿದ ಮಾತು. ಸೆ.14ರಂದು ಉತ್ತರ ಪ್ರದೇಶದ ಹತ್ರಸ್ ನಲ್ಲಿ ನಾಲ್ವರು ದುಷ್ಕರ್ಮಿಗಳು 19ರ ಹರೆಯದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಚಾರವೆಸಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಯುವತಿ 15 ದಿನಗಳ ಬಳಿಕ ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.

ಸಿಬಿಐಯು ಆರೋಪಿಗಳಾದ ಸಂದೀಪ್, ರವಿ, ರಾಮು ಮತ್ತು ಲವಕುಶ ಅವರ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗಾಗಿ ಐಪಿಸಿಯ ವಿವಿಧ ಕಲಮ್‌ಗಳಡಿ ಪ್ರಕರಣವನ್ನು ದಾಖಲಿಸಿದೆ. ಈ ಆರೋಪಗಳಿಗೆ ಮರಣದಂಡನೆಯು ಗರಿಷ್ಠ ಶಿಕ್ಷೆಯಾಗಿದೆ.

ಹತ್ರಸ್ ಅತ್ಯಾಚಾರ ಸಂತ್ರಸ್ತೆಯು ಸೆ.22ರಂದು ನೀಡಿದ್ದ ಮರಣಪೂರ್ವ ಹೇಳಿಕೆಯು 2,000 ಪುಟಗಳ ಸಿಬಿಐ ದೋಷಾರೋಪಣ ಪಟ್ಟಿಯಲ್ಲಿ ಮುಖ್ಯವಾಗಿದೆ.

ಪ್ರಕರಣದಲ್ಲಿ ಸಿಬಿಐ ತನಿಖೆಯ ಬಗ್ಗೆ ಯುವತಿಯ ಕುಟುಂಬವು ತೃಪ್ತಿಯನ್ನು ವ್ಯಕ್ತಪಡಿಸಿದೆ.

‘ಇದು ನಮ್ಮ ಹುಡುಗಿಯನ್ನು ವಾಪಸ್ ತರುವುದಿಲ್ಲ ಎನ್ನುವುದು ನಮಗೆ ಗೊತ್ತು. ಆದರೆ ಆಕೆಗೆ ನ್ಯಾಯವೊದಗಿಸುವಲ್ಲಿ ಇನ್ನೊಂದು ಹೆಜ್ಜೆಯನ್ನು ಮುಂದಿರಿಸಿದ್ದೇವೆ. ನಮಗೆ ಸಂತಸವೇನಿಲ್ಲ,ಆದರೆ ಕನಿಷ್ಠ ಪ್ರಕರಣವು ನ್ಯಾಯೋಚಿತ ಮುಕ್ತಾಯಕ್ಕೆ ಹತ್ತಿರವಾಗಿದೆ ’ಎಂದು ಯುವತಿಯ ಹಿರಿಯ ಸಹೋದರ ಸುದ್ದಿಗಾರರಿಗೆ ತಿಳಿಸಿದರು.

ಯುವತಿಯ ಮನೆಯಲ್ಲಿ ಆಕೆಯ ಆತಂಕಿತ ತಾಯಿ ಭಾರೀ ಭದ್ರತೆಯ ವರಾಂಡಾದ ಮೂಲೆಯಲ್ಲಿ ಕುಳಿತು ಬಿಕ್ಕುತ್ತಿದ್ದರು. ಕನಿಷ್ಠ 80 ಸಿಆರ್‌ಪಿಎಫ್ ಸಿಬ್ಬಂದಿ ಮನೆಯ ಹೊರಗೆ ಮೊಕ್ಕಾಂ ಹೂಡಿದ್ದಾರೆ. ಗ್ರಾಮದಲ್ಲಿ 100 ಮೇಲ್ಜಾತಿಯ ಕುಟುಂಬಗಳ ನಡುವೆ ಇದೊಂದೇ ದಲಿತ ಸಮುದಾಯಕ್ಕೆ ಸೇರಿದ ಕುಟುಂಬವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News