ಜ.17ರಂದು ಪಲ್ಸ್ ಪೊಲಿಯೋ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ, ಡಿ.19: ಜಿಲ್ಲೆಯ 0ರಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಮುಂದಿನ ಜನವರಿ 17ರಂದು ಪಲ್ಸ್ ಪೊಲಿಯೋ ಲಸಿಕೆ ನೀಡಲಾಗುವುದು. ಎಲ್ಲಾ ಪೋಷಕರು ತಪ್ಪದೆ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವಂತೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲಸಿಕಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ದೇಶದಲ್ಲಿ 2011ರ ನಂತರ ಮತ್ತು ರಾಜ್ಯದಲ್ಲಿ 2007ರ ನಂತರ ಯಾವುದೇ ಪೊಲಿಯೋ ಪ್ರಕರಣ ವರದಿಯಾಗಿಲ್ಲ. ಆದರೆ ನೆರೆಯ ಪಾಕಿಸ್ತಾನ ಮತ್ತು ಆಫಘಾನಿಸ್ತಾನದಲ್ಲಿ ಇನ್ನೂ ಸಹ ಪೊಲಿಯೋ ಸಕ್ರೀಯ ಪ್ರಕರಣಗಳು ವರದಿಯಾಗುತ್ತಿದ್ದು,ಇದರಿಂದ ದೇಶದಲ್ಲಿ ವೈರಸ್ ಹರಡುವ ಸಾಧ್ಯತೆಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ವಿವರಿಸಿದರು.
ಜಿಲ್ಲೆಯ ವಲಸೆ ಕಾರ್ಮಿಕರು ಮತ್ತು ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿ ರುವವರ ಮಕ್ಕಳು ಪೊಲಿಯೋ ಲಸಿಕೆಯಿಂದ ವಂಚಿತರಾಗದಂತೆ ನಗರಸಭೆ, ಕಾರ್ಮಿಕ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಹೆಚ್ಚಿನ ನಿಗಾ ವಹಿಸಬೇಕು. ಅವರಲ್ಲಿ ಅರಿವು ಮೂಡಿಸಿ ಲಸಿಕೆ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಪೊಲಿಯೋ ಲಸಿಕೆ ನೀಡುವ ಎಲ್ಲಾ ಕೇಂದ್ರಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.
686 ಬೂತ್‌ಗಳು: ಪೊಲಿಯೋ ಲಸಿಕೆ ನೀಡಲು ಈಗಾಗಲೇ 686 ಬೂತ್ ತೆರೆಯಲು ನಿರ್ಧರಿಸಿದ್ದು, ಇದಕ್ಕೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಯರ ನೆರವು ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿ, ಅಗತ್ಯವಿರುವ ವಾಹನ ವ್ಯವಸ್ಥೆ ಒದಗಿಸುವಂತೆ ಆರ್‌ಟಿಓ ಅಧಿಕಾರಿಗೆ ಸೂಚಿಸಿದರು.
ನಗರಸಭೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನವರಿ 17ರಂದು ನಡೆಯುವ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ನೀಡಿ, ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಪ್ರತೀ ಮನೆಗೆ ಭೇಟಿ ಲಸಿಕೆ ಪಡೆದಿರುವ ಬಗ್ಗೆ ಪರಿಶೀಲಿಸಿ. ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಸಹ ಉಚಿತವಾಗಿ ಲಸಿಕೆ ನೀಡಲು ಕ್ರಮಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಓ ಡಾ.ನವೀನ್ ಭಟ್, ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ, ಜಿಲ್ಲಾ ಲಸಿಕಾ ಅಧಿಕಾರಿ ಡಾ.ಎಂ.ಜಿ.ರಾಮ, ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.