ಕೈಗೆಟಕುವ ದರದಲ್ಲಿ ಕೊರೋನ ಚಿಕಿತ್ಸೆಯು ಪ್ರತಿಯೋಬ್ಬರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಡಿ. 19: ಕೈಗೆಟಕುವ ದರದಲ್ಲಿ ಕೊರೋನ ಸೋಂಕಿಗೆ ಚಿಕಿತ್ಸೆ ಮೂಲಭೂತ ಹಕ್ಕು ಎಂದು ಶುಕ್ರವಾರ ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್, ಕೊರೋನ ಸಾಂಕ್ರಾಮಿಕ ರೋಗದ ಸಂದರ್ಭ ಕೈಗೆಟಕುವ ಬೆಲೆಯಲ್ಲಿ ಚಿಕಿತ್ಸೆ ಒದಗಿಸುವುದು ರಾಜ್ಯದ ಕರ್ತವ್ಯ ಎಂದು ಹೇಳಿದೆ.
‘‘ಇದು ಕೋವಿಡ್-19ರ ವಿರುದ್ಧದ ಜಾಗತಿಕ ಯುದ್ದ. ಆದುದರಿಂದ ಸರಕಾರ-ಸಾರ್ವಜನಿಕರ ಸಹಭಾಗಿತ್ವ ಇರುತ್ತದೆ’’ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ಹೇಳಿದೆ.
ಕೊರೋನ ಚಿಕಿತ್ಸೆ ದುಬಾರಿಯಾಗುವುದಕ್ಕೆ ಯಾವುದೇ ಕಾರಣವಿದ್ದರೂ ಅದನ್ನು ಆಕ್ಷೇಪಿಸಲು ಸಾಧ್ಯವಿಲ್ಲ. ಆದರೆ, ಅದು ಸಾಮಾನ್ಯ ಜನರಿಗೆ ಭರಿಸಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದರು.
ಒರ್ವ ವ್ಯಕ್ತಿ ಕೋವಿಡ್‌ನಿಂದ ಒಂದು ಬಾರಿ ಗುಣಮುಖನಾದರೂ ಆರ್ಥಿಕವಾಗಿ ಹಲವು ಬಾರಿ ನಾಶವಾಗಿರುತ್ತಾನೆ. ಆದುದರಿಂದ ರಾಜ್ಯ ಸರಕಾರ ಹಾಗೂ ಸ್ಥಳೀಯಾಡಳಿತ ಚಿಕಿತ್ಸೆಯ ಹೆಚ್ಚು ಅವಕಾಶಗಳನ್ನು ನೀಡಬೇಕು ಅಥವಾ ಖಾಸಗಿ ಆಸ್ಪತ್ರೆಗಳ ವಿಧಿಸುವ ಶುಲ್ಕಕ್ಕೆ ಮಿತಿ ವಿಧಿಸಬೇಕು ಎಂದು 17 ಪುಟಗಳ ಆದೇಶದಲ್ಲಿ ಪೀಠ ಹೇಳಿದೆ.