ಕಂಗನಾ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆ ನಡೆಸಲು ನ್ಯಾಯಾಲಯದ ಸೂಚನೆ

Update: 2020-12-19 15:21 GMT

ಮುಂಬೈ, ಡಿ.19: ನಟಿ ಕಂಗನಾ ರಣಾವತ್ ವಿರುದ್ಧ ಕವಿ, ಗೀತರಚನೆಗಾರ ಜಾವೇದ್ ಅಖ್ತರ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ಬಗ್ಗೆ ತನಿಖೆ ನಡೆಸುವಂತೆ ಮತ್ತು ಜನವರಿ 16ರಂದು ವರದಿ ಸಲ್ಲಿಸುವಂತೆ ಮುಂಬೈಯ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.

ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಂಗನಾ ತನ್ನ ವಿರುದ್ಧ ಆಧಾರರಹಿತ ಮತ್ತು ಮಾನಹಾನಿಕರ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಳೆದ ತಿಂಗಳು ಅಖ್ತರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ನಟ ಸುಷಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಕಂಗನಾ, ಬಾಲಿವುಡ್‌ನಲ್ಲಿ ಸ್ವಹಿತಾಸಕ್ತರ ತಂಡವಿದೆ ಎಂದಿದ್ದರು. ಈ ಸಂದರ್ಭ ಅಖ್ತರ್ ಹೆಸರನ್ನೂ ಉಲ್ಲೇಖಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ತನ್ನ ಹಾಗೂ ನಟ ಹೃತಿಕ್ ರೋಷನ್ ಸಂಬಂಧದ ವಿಷಯದಲ್ಲಿ ಹೇಳಿಕೆ ನೀಡಬಾರದೆಂದು ಅಖ್ತರ್ ಬೆದರಿಸಿದ್ದರು ಎಂದು ಕಂಗನಾ ಮಾಡಿದ್ದ ಟ್ವೀಟ್ ಅನ್ನು ಲಕ್ಷಾಂತರ ಜನ ವೀಕ್ಷಿಸಿದ್ದು ಇದು ತನ್ನ ಘನತೆಗೆ ಕುಂದುಂಟು ಮಾಡಿದೆ ಎಂದು ಅಖ್ತರ್ ದೂರಿನಲ್ಲಿ ಉಲ್ಲೇಖಿಸಿದ್ದರು.

ದೂರನ್ನು ವಿಚಾರಣೆಗೆ ಎತ್ತಿಕೊಂಡ ಮ್ಯಾಜಿಸ್ಟ್ರೇಟ್ ಕೋರ್ಟ್, ಪ್ರಕರಣದ ಬಗ್ಗೆ ತನಿಖೆ ನಡೆಸಿ ಜನವರಿ 16ರಂದು ವರದಿ ಸಲ್ಲಿಸುವಂತೆ ಜುಹು ಪೊಲೀಸರಿಗೆ ಸೂಚಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News