×
Ad

ಕುಂದಾಪುರ-ಕಾರವಾರ ರಾ.ಹೆದ್ದಾರಿ-66 ಲೋಕಾರ್ಪಣೆ

Update: 2020-12-19 21:09 IST
ಶನಿವಾರ ಲೋಕಾರ್ಪಣೆಗೊಂಡ ಕುಂದಾಪುರ ಮತ್ತು ಕರ್ನಾಟಕ-ಗೋವಾ ಗಡಿವರೆಗಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 66ರ ಒಂದು ದೃಶ್ಯ

ಉಡುಪಿ, ಡಿ.19: ಜಿಲ್ಲೆಯ ಕುಂದಾಪುರದಿಂದ ಉತ್ತರ ಕನ್ನಡ ಜಿಲ್ಲೆ ಕಾರವಾರದ ಕರ್ನಾಟಕ-ಗೋವಾವರೆಗೆ ನಿರ್ಮಾಣಗೊಂಡ ರಾಷ್ಟ್ರೀಯ ಹೆದ್ದಾರಿ -66 ಚತುಷ್ಪಥವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ಲೋಕಾರ್ಪಣೆಗೊಳಿಸಿದರು.

ರಾಜ್ಯದಲ್ಲಿ 1,197 ಕಿ.ಮಿ. ಉದ್ದದ 10,904 ಕೋಟಿ ರೂ.ವೆಚ್ಚದ ಒಟ್ಟು 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಗಡ್ಕರಿ ಅವರು ಇಂದು ಹೊಸದಿಲ್ಲಿ ಯಿಂದ ರಾಷ್ಟ್ರಕ್ಕೆ ಸಮರ್ಪಿಸಿದರಲ್ಲದೇ, ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಕುಂದಾಪುರದಿಂದ ಕರ್ನಾಟಕ-ಗೋವಾ ಗಡಿಯವರೆಗಿನ187.240 ಕಿ.ಮೀ. ಉದ್ದದ ಒಟ್ಟು 2639 ಕೋಟಿ ರೂ.ವೆಚ್ಚದ ಈ ಕಾಮಗಾರಿ ಹೊನ್ನಾವರದವರೆಗೆ ಪೂರ್ಣಗೊಂಡಿದ್ದು, ಉಳಿದೆಡೆ ವೇಗವಾಗಿ ಸಾಗಿದೆ. ಕಾಮಗಾರಿ 2014ರ ಮಾ.3ರಂದು ಪ್ರಾರಂಭಗೊಂಡಿದ್ದು, 2021ರ ಡಿ.31ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅರಬಿ ಸಮುದ್ರಕ್ಕೆ ಸಮಾನಾಂತರವಾಗಿ ಸಾಗಿ ಉಡುಪಿ ಮತ್ತು ಉತ್ತರ ಕನ್ನಡವನ್ನು ಸಂಪರ್ಕಿಸುವ ಈ ಹೆದ್ದಾರಿಯಲ್ಲಿ 28 ಪ್ರಮುಖ ಸೇತುವೆಗಳು, 59 ಕಿರುಸೇತುವೆಗಳು ನಿರ್ಮಾಣವಾಗಲಿವೆ. ಇಲ್ಲಿ ಮೂರು ಟೋಲ್ ಫ್ಲಾಜಾಗಳಿರುತ್ತವೆ.

ಪುತ್ತಿಗೆ ಸೇತುವೆಗೆ ಶಿಲಾನ್ಯಾಸ: ಸಚಿವ ನಿತಿನ್ ಗಡ್ಕರಿ ಅವರು ಜಿಲ್ಲೆಯ ಇತರ ಮೂರು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ತೀರ್ಥಹಳ್ಳಿ ಹಾಗೂ ಮಲ್ಪೆ ನಡುವೆ ನಿರ್ಮಾಣಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ-169ಎ ಯಲ್ಲಿ ಬರುವ ಮೂರು ಕಿರು ಸೇತುವೆಗಳಿಗೆ ಶಂಕುಸ್ಥಾಪನೆ ನೆರವೇಸಿದರು. ಒಟ್ಟು 0.360ಕಿ.ಮೀ. ಉದ್ದದ ಈ ಸೇತುವೆಗಳು ಒಟ್ಟು 8.20 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಇವುಗಳಲ್ಲಿ ಹಿರಿಯಡ್ಕ ಸಮೀಪದ ಪುತ್ತಿಗೆ ಸೇತುವೆಯೂ ಸೇರಿದೆ.

ತೀರ್ಥಹಳ್ಳಿಯಿಂದ ಶೃಂಗೇರಿ ನಡುವಿನ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗಡಿಕಲ್ಲುವಿನಿಂದ ಎಸ್‌ಕೆ ಬಾರ್ಡರ್‌ವರೆಗೆ 96.08 ಕೋಟಿ ರೂ.ವೆಚ್ಚದಲ್ಲಿ 45.12ಕಿ.ಮೀ. ಉದ್ದದ ದ್ವಿಪಥ ನಿರ್ಮಾಣಕ್ಕೂ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿ ದರು. ರಾ.ಹೆದ್ದಾರಿ-72ರಲ್ಲಿ ಚಾರ್ಮಾಡಿ ಘಾಟಿಯಲ್ಲಿ ಕಳೆದ ಮಳೆಗಾಲದಲ್ಲಿ ಕುಸಿದ ರಸ್ತೆಯ ಬದಿಗೆ 19.36 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಹೊಸದಿಲ್ಲಿ ಹಾಗೂ ಬೆಂಗಳೂರಿನಿಂದ ವೀಡಿಯೋದ ನೇರ ಪ್ರಸಾರದಲ್ಲಿ ಕಾರ್ಯಕ್ರಮವನ್ನು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಳಿತು ವೀಕ್ಷಿಸಿದ ಸಂಸದೆ ಶೋಭಾ ಕರಂದ್ಲಾಜೆ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಕಾಮಗಾರಿಗಳ ಕುರಿತು ವಿವರಗಳನ್ನು ನೀಡಿದರು.

ಎನ್‌ಎಚ್-169ಎಯಲ್ಲಿ ಮಲ್ಪೆಯಿಂದ ಕರಾವಳಿ ಬೈಪಾಸ್‌ವರೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಅನುಮತಿ ದೊರೆತಿದ್ದು, ಪರ್ಕಳದಲ್ಲೂ ಶೀಘ್ರವೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು. ಕುಂದಾಪುರದಲ್ಲೂ ಕಾಮಗಾರಿ ನಡೆಯುತಿದ್ದು, ಮಾರ್ಚ್ ವೇಳೆಗೆ ಮುಗಿಯುವ ನಿರೀಕ್ಷೆ ಇದೆ ಎಂದರು.

ಶಾಸಕ ಕೆ.ರಘುಪತಿ ಭಟ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸೇರಿದಂತೆ ವಿವಿದ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News