ಪೆರ್ನೆಯಲ್ಲಿ ಚಿರತೆ ಪ್ರತ್ಯಕ್ಷ

Update: 2020-12-19 16:42 GMT

ಉಪ್ಪಿನಂಗಡಿ: ಕಳೆದ ಸೋಮವಾರ ಮತ್ತು ಮಂಗಳವಾರ ಕೋಡಿಂಬಾಡಿ ಪರಿಸರದಲ್ಲಿ ಸುತ್ತಾಡಿ ಪರಿಸರದ ಜನತೆಯ ಆತಂಕಕ್ಕೆ ಕಾರಣವಾದ ಚಿರತೆಅರಣ್ಯ ಇಲಾಖೆಯವರು ಇಟ್ಟ ಬೋನಿಗೂ ಬೀಳದೆ ಪರಾರಿಯಾಗಿದ್ದು, ಶನಿವಾರ ಮಧ್ಯಾಹ್ನ ಪೆರ್ನೆ ಗ್ರಾಮದ ಕೊರತಿಕಟ್ಟೆಯ ಶರೂನ್ ನೊರೊನ್ಹಾ ಎಂಬವರ ಮನೆ ಬಳಿ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.

ಕೋಡಿಂಬಾಡಿಯ ಜಿನರಾಜ್ ಜೈನ್ ಅವರ ಮನೆಯ ಬಳಿ ಸೋಮವಾರ ಹಾಗೂ ಮಂಗಳವಾರ ನಸುಕಿನ ಜಾವ ನಡೆದಾದಿ ಅಲ್ಲಿನ ಪರಿಸರವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಬಳಿಕ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಬೋನು ಕೂಡಾ ಇಟ್ಟಿದ್ದರು. ಆದರೆ ಆ ಮೇಲೆ ಚಿರತೆಯ ಜಾಡು ಪತ್ತೆಯಾಗಿರಲಿಲ್ಲ. ಆದರೆ ಶನಿವಾರ ಮಧ್ಯಾಹ್ನ ಶರೂನ್ ನೊರೋನ್ಹಾ ಎಂಬವರ ಮನೆಯ ಬಳಿ ಚಿರತೆ ಬಂದಿದ್ದು, ಇದನ್ನು ನೋಡಿ ಮನೆ ಮಂದಿ ಭಯಭೀತರಾಗಿ ಕಿರುಚಿದಾಗ ಪಕ್ಕದ ಕಾಡಿಗೆ ಓಡಿ ಹೋಗಿದೆ. ಸುದ್ದಿ ತಿಳಿದು ಊರಿನವರು ಆ ಪರಿಸರದಲ್ಲಿ ಹುಡುಕಾಡಿದ್ದು, ಅದರ ಸುಳಿವು ಪತ್ತೆಯಾಗಿರಲಿಲ್ಲ. ಆದರೆ ಸಂಜೆಯಾಗುತ್ತಲೇ ಶರೂನ್ ನೊರೊನ್ಹಾ ಅವರ ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಕಾಡಿನಲ್ಲಿ ಅದರ ಘರ್ಜನೆ ಕೇಳಿ ಬಂದಿತ್ತು ಎಂದು ಪೆರ್ನೆ ಗ್ರಾ.ಪಂ. ಮಾಜಿ ಸದಸ್ಯ ಶಿವಪ್ಪ ನಾಯ್ಕ ಪೆರ್ನೆ ತಿಳಿಸಿದ್ದಾರೆ.

ಮಾಡತ್ತಾರು- ಕೊರತಿಕಟ್ಟೆ- ಕಾರ್ಲವು ಹತ್ತಿರ ಹತ್ತಿರದ ಪ್ರದೇಶವಾಗಿದ್ದು, ಮನೆಗಳು ದೂರ ದೂರ ಇವೆ. ಸೇಡಿಯಾಪು, ಕೋಡಿಂಬಾಡಿಯಿಂದಾಗಿ ಹಾದು ಬರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಗೇರು ಗಿಡಗಳ ನೆಡು ತೋಪು ಈ ಪ್ರದೇಶಗಳನ್ನು ಹಾದು ಹೋಗುತ್ತಿದೆ. ಅಲ್ಲದೇ, ಕಾರ್ಲ ಬಳಿ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಸುಮಾರು 15 ಎಕರೆ ಜಮೀನು ಕಾಡುಗಳಿಂದ ಆವೃತವಾಗಿದ್ದು, ಇಲ್ಲಿ ಚಿರತೆ ಸೇರಿಕೊಂಡಿರಬಹುದು ಎಂದು ಶಂಕಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News