×
Ad

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಸಂಸದೀಯ ಸಮಿತಿಗಳಿಗೆ ನಾಗೌರ್ ಸಂಸದರ ರಾಜೀನಾಮೆ

Update: 2020-12-19 23:14 IST

ಜೈಪುರ,ಡಿ.19: ರಾಜಸ್ಥಾನದ ನಾಗೌರ್ ಸಂಸದ ಹನುಮಾನ ಬೇನಿವಾಲ್ ಅವರು ಕೇಂದ್ರದ ನೂತನ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಶನಿವಾರ ಕೈಗಾರಿಕೆಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಅಹವಾಲುಗಳ ಕುರಿತು ಸಂಸದೀಯ ಸಮಿತಿಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಸಂಚಾಲಕರಾಗಿರುವ ಬೇನಿವಾಲ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತನ್ನ ರಾಜೀನಾಮೆಯನ್ನು ಸಲ್ಲಿಸಿದರು.

ಸಂಸದೀಯ ಸಮಿತಿಗಳಲ್ಲಿ ವಿವಿಧ ಜನಕೇಂದ್ರಿತ ಸಮಸ್ಯೆಗಳನ್ನು ತಾನು ಪ್ರಸ್ತಾಪಿಸಿದ್ದೆ. ಅವುಗಳ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ನೋವು ಮೂಡಿಸಿದೆ. ಕ್ರಮಗಳನ್ನು ಕೈಗೊಳ್ಳದಿದ್ದರೆ ಸಂಸದೀಯ ವ್ಯವಸ್ಥೆಯಲ್ಲಿನ ಸಮಿತಿಗಳಿಗೆ ಯಾವುದೇ ಸಮರ್ಥನೆಯಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿರುವ ಬೇನಿವಾಲ್,ತಾನು ಎತ್ತಿದ್ದ ಸಮಸ್ಯೆಗಳಿಗೆ ಕಿವಿಗೊಡದ್ದರಿಂದ ಮತ್ತು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಈ ಸಮಿತಿಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದೇನೆ ಎಂದಿದ್ದಾರೆ.

ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಲೇ ಬಂದಿರುವ ಬೇನಿವಾಲ್,ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳಬೇಕು ಮತ್ತು ರೈತರ ಕುರಿತು ಸ್ವಾಮಿನಾಥನ್ ಆಯೋಗದ ವರದಿಗಳನ್ನು ಜಾರಿಗೊಳಿಸಬೇಕು ಎಂದು ಕೇಂದ್ರವನ್ನು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News