ಕೋವಿಡ್ ಲಸಿಕೆಗೆ ಅನುಮೋದನೆ ಸನ್ನಿಹಿತ: ಕೇಂದ್ರ ಸರಕಾರ
ಹೊಸದಿಲ್ಲಿ, ಡಿ.20: ದೇಶದಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿಯನ್ನು ಬಾಧಿಸಿದ ಕೊರೋನ ವೈರಸ್ ಸೋಂಕು ವಿರುದ್ಧದ ಲಸಿಕೆಗೆ ಅಂತಿಮ ಒಪ್ಪಿಗೆ ನೀಡುವ ಹಂತ ಸನ್ನಿಹಿತವಾಗಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ದೇಶದಲ್ಲಿ ಆದ್ಯತೆ ಮೇಲೆ ಲಸಿಕೆ ನೀಡಬೇಕಾದ ಸುಮಾರು 30 ಕೋಟಿ ಮಂದಿಗೆ ತ್ವರಿತವಾಗಿ ಲಸಿಕೆ ನೀಡುವ ಕಾರ್ಯ ಆಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉನ್ನತ ಮಟ್ಟದ ಸಚಿವರ ಗುಂಪಿನ 22ನೇ ಸಭೆಯಲ್ಲಿ ಮಾತನಾಡಿದ ಅವರು, ಜನ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಪಾಡುವುದು, ಕೈಗಳ ನೈರ್ಮಲ್ಯ ಮತ್ತು ಯಾವುದೇ ರೋಗಲಕ್ಷಣ ಕಾಣಿಸಿಕೊಂಡರೆ ಪರೀಕ್ಷೆಗೆ ಒಳಪಡುವಂಥ ಕೋವಿಡ್‌ಗೆ ಸೂಕ್ತ ನಡವಳಿಕೆಗಳನ್ನು ಪ್ರದರ್ಶಿಸುವುದನ್ನು ಮುಂದುವರಿಸಬೇಕು ಎಂದು ಸಲಹೆ ಮಾಡಿದರು.
ಶನಿವಾರ ದೇಶದ ಒಟ್ಟು ಸೋಂಕಿತರ ಸಂಖ್ಯೆ ಒಂದು ಕೋಟಿಯ ಗಡಿ ದಾಟಿದ್ದು, ಕೋವಿಡ್-19 ಸೋಂಕು ಬೆಳವಣಿಗೆ ದರ 2%ಕ್ಕೆ ಕುಸಿದಿದೆ. ಸೋಂಕಿತರ ಮರಣ ಪ್ರಮಾಣ 1.45% ಆಗಿದ್ದು, ಇದು ವಿಶ್ವದಲ್ಲೇ ಕನಿಷ್ಠ. ಭಾರತದಲ್ಲಿ ಗುಣಮುಖರಾದವರ ಪ್ರಮಾಣ ಶೇಕಡ 95.46 ಇದ್ದು, ದಿನಕ್ಕೆ 10 ಲಕ್ಷ ಮಾದರಿಗಳ ಪರೀಕ್ಷೆ ಮಾಡುವ ಕಾರ್ಯತಂತ್ರದಿಂದಾಗಿ ಕ್ರೋಢೀಕೃತ ಧನಾತ್ಮಕತೆ ದರ 6.25%ಗೆ ಇಳಿದಿದೆ ಎಂದು ವರ್ಧನ್ ವಿವರಿಸಿದರು.
ಸಮಗ್ರ ಪರೀಕ್ಷೆ, ಪತ್ತೆ ಮಾಡುವಿಕೆ ಮತ್ತು ಚಿಕಿತ್ಸಾ ವಿಧಾನಗಳನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರಿಂದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹಬ್ಬಗಳು ಇದ್ದಾಗ್ಯೂ, ಪ್ರಕರಣಗಳ ಸಂಖ್ಯೆ ಹೆಚ್ಚಿಲ್ಲ ಎಂದು ಪ್ರತಿಪಾದಿಸಿದರು.
ವಿದೇಶಾಂಗ ವ್ಯವಹಾರಗಳ ಝಾತೆ ಸಚಿವ ಎಸ್.ಜೈಶಂಕರ್, ನಾಗರಿಕ ವಿಮಾನಯಾನಗಳ ಖಾತೆ ಸಚಿವ ಹರದೀಪ್ ಎಸ್ ಪುರಿ, ರಾಜ್ಯ ಸಚಿವರಾದ ಅಶ್ವಿನಿ ಕುಮಾರ್ ಚೌಬೆ, ನಿತ್ಯಾನಂದ ರಾಯ್, ನೀತಿ ಆಯೋಗದ ಸದಸ್ಯರಾದ ವಿ.ಕೆ.ಪಾಲ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.