ಭಿನ್ನರೊಂದಿಗೆ ಸೋನಿಯಾ ಗಾಂಧಿ ಸಭೆಯಲ್ಲಿ ಆಗಿದ್ದೇನು?
ಹೊಸದಿಲ್ಲಿ, ಡಿ.20: ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿ ಮತ್ತು ಸಕ್ರಿಯ ನಾಯಕತ್ವ ಆಗ್ರಹಿಸಿ 23 ಮಂದಿ ಮುಖಂಡರು ಪತ್ರ ಬರೆದು ನಾಲ್ಕು ತಿಂಗಳ ಬಳಿಕ ಶನಿವಾರ ಪಕ್ಷದ ಮುಖಂಡ ಸಭೆಯನ್ನು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿದ್ದರು.
ಐದು ಗಂಟೆ ಕಾಲ ನಡೆದ ಸಭೆಯಲ್ಲಿ ಆನಂದ್ ಶರ್ಮಾ, ಮನೀಶ್ ತಿವಾರಿ, ಗುಲಾಂ ನಬಿ ಆಝಾದ್, ಶಶಿ ತರೂರ್, ಪೃಥ್ವಿರಾಜ್ ಚವ್ಹಾಣ್ ಮತ್ತು ಭೂಪೇಂದ್ರ ಹೂಡಾ ಸೇರಿದಂತೆ ಪತ್ರ ಬರೆದ 23 ಮುಖಂಡರ ಪೈಕಿ ಹಲವು ಮಂದಿ ಭಾಗವಹಿಸಿದ್ದರು. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡಾ ಪಾಲ್ಗೊಂಡಿದ್ದ ಸಭೆಯಲ್ಲಿ ಮುಖಂಡರಿಗೆ ಒಬ್ಬರ ಬಳಿಕ ಒಬ್ಬರಂತೆ ಸುದೀರ್ಘವಾಗಿ ಮಾತನಾಡಲು ಅವಕಾಶ ಮಾಡಿಕೊಡಲಾಯಿತು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
"ಸಾಂಸ್ಥಿಕ ಸಂಘಟನೆಯ ಕೊರತೆ, ಪಕ್ಷದ ಇತರ ಮುಖಂಡರು ಮತ್ತು ನಾಯಕತ್ವ ನಡುವಿನ ಅಂತರ ಮತ್ತಿತರ ವಿಷಯಗಳು ಚರ್ಚೆಗೆ ಬಂದಿವೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಿದಂತೆ ನಿಯತವಾಗಿ ಪಕ್ಷದ ಮುಖಂಡರ ಸಭೆ ನಡೆಯಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು" ಎಂದು ಪತ್ರಕ್ಕೆ ಸಹಿ ಮಾಡಿದ್ದ ಹಾಗೂ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ವಿವರಿಸಿದ್ದಾರೆ.
"ಪಕ್ಷಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯುವ ಬಗ್ಗೆ ಕೂಡಾ ಸಂಕ್ಷಿಪ್ತ ಚರ್ಚೆ ನಡೆಯಿತು. ಚುನಾವಣೆ ನಡೆಸುವ ಹೊಣೆಯನ್ನು ಈಗಾಗಲೇ ಕೇಂದ್ರೀಯ ಚುನಾವಣಾ ಪ್ರಾಧಿಕಾರಕ್ಕೆ ವಹಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಸುದೀರ್ಘ ಚರ್ಚೆ ಅಗತ್ಯ ಇಲ್ಲ ಎಂಬ ನಿರ್ಧಾರಕ್ಕೆ ಬಂದೆವು" ಎಂದು ಹೇಳಿದ್ದಾರೆ.
ಹಿರಿಯ ಮುಖಂಡರಿಂದ ಅಭಿಪ್ರಾಯಗಳನ್ನು ಪಡೆಯಲು ಸಿದ್ಧ ಎಂದು ರಾಹುಲ್ ಸ್ಪಷ್ಟಪಡಿಸಿದರು. ಬಹಳಷ್ಟು ಮಂದಿ ಮುಖಂಡರು ರಾಜೀವ್ ಗಾಂಧಿಯವರ ಸಹೋದ್ಯೋಗಿಗಳಾಗಿದ್ದು, ಅವರಿಗೆ ಪಕ್ಷ ಗೌರವ ನೀಡಲಿದೆ ಎಂದು ರಾಹುಲ್ ಭರವಸೆ ನೀಡಿದರು.