×
Ad

'ದೀದಿ' ಕುಟುಂಬದ ಯಾರೂ ಸಿಎಂ ಆಗುವ ಬಯಕೆ ಹೊಂದಿಲ್ಲ: ಬಿಜೆಪಿಗೆ ಟಿಎಂಸಿ ತಿರುಗೇಟು

Update: 2020-12-20 09:29 IST

ಕೊಲ್ಕತ್ತಾ, ಡಿ.20: ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಸ್ವಜನ ಪಕ್ಷಪಾತ ಮಿತಿಮೀರಿದೆ ಎಂದು ಬಿಜೆಪಿಗೆ ಪಕ್ಷಾಂತರಗೊಂಡಿರುವ ಸುವೇಂದು ಅಧಿಕಾರಿ ಆರೋಪ ಮಾಡಿದ ಬೆನ್ನಲ್ಲೇ "ದೀದಿ ಕುಟುಂಬದ ಯಾರೂ ಮುಖ್ಯಮಂತ್ರಿಯಾಗಲು ಬಯಸಿಲ್ಲ" ಎಂದು ಪಕ್ಷ ತಿರುಗೇಟು ನೀಡಿದೆ.

"ಅಧಿಕಾರಿ ಕುಟುಂಬ ವಂಶಪಾರಂಪರ್ಯ ರಾಜಕೀಯಕ್ಕೆ ಅಂಟಿಕೊಂಡಿಲ್ಲವೇ? ಜಯ್ ಶಾ ಅವರಿಗೆ ಕೇಂದ್ರ ಗೃಹ ಸಚಿವರ ಮಗ ಎನ್ನುವುದನ್ನು ಬಿಟ್ಟರೆ ಬಿಸಿಸಿಐ ಕಾರ್ಯದರ್ಶಿಯಾಗಲು ಯಾವ ಅರ್ಹತೆ ಇದೆ" ಎಂದು ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿರುವ ಕಲ್ಯಾಣ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇತರ ಮುಖಂಡರ ಬದಲಾಗಿ ತಮ್ಮ ಅಳಿಯ ಅಭಿಷೇಕ್ ಬ್ಯಾನರ್ಜಿಯವರನ್ನು ಬೆಳೆಸುತ್ತಿದ್ದಾರೆ ಎಂದು ಬಿಜೆಪಿ ಮಾಡಿದ ಆರೋಪಕ್ಕೆ ಪ್ರತಿಯಾಗಿ ಬ್ಯಾನರ್ಜಿ ಈ ಪ್ರಶ್ನೆ ಹಾಕಿದ್ದಾರೆ.

ವಂಶ ಪಾರಂಪರ್ಯ ಆಡಳಿತದ ಬಗ್ಗೆ ಅಧಿಕಾರಿ ಹಾಗೂ ಬಿಜೆಪಿ ಮಾಡಿದ ಆರೋಪಕ್ಕೆ ಇದೇ ಮೊದಲ ಬಾರಿಗೆ ಟಿಎಂಸಿ ಪ್ರತಿಕ್ರಿಯೆ ನೀಡಿದೆ. "ಮಮತಾ ಬ್ಯಾನರ್ಜಿ ಬಂಗಾಳದ ಸಿಎಂ ಆಗಿರುವುದು ಜನರ ಪ್ರೀತಿಯಿಂದ. ನಾಲ್ಕೂವರೆ ದಶಕಗಳ ಕಾಲ ಬೀದಿಯಲ್ಲಿದ್ದು, ಜನರ ಹಕ್ಕುಗಳ ಬಗ್ಗೆ ಮಾತನಾಡಿ ಅವರ ಪರವಾಗಿ ಹೋರಾಡಿದ್ದರು. ಅವರು ರಾತ್ರೋರಾತ್ರಿ ಸಿಎಂ ಆಗಿಲ್ಲ. ಯಾರಿಂದಲೂ ಆಗಿಲ್ಲ. ಬಂಗಾಳದ ಜನ ಅವರನ್ನು ಸಿಎಂ ಮಾಡಿದ್ದಾರೆ. ಬಿಜೆಪಿಯ ಸುಳ್ಳಿನ ಕಂತೆಗಳು ದೀದಿ ಸರಕಾರದ ಕೆಲಸ ಮತ್ತು ಅಭಿವೃದ್ಧಿಯಿಂದ ವಿಮುಖವಾಗಿಸಲಾರವು" ಎಂದು ಹೇಳಿದರು.

ಸುವೇಂದು ಅಧಿಕಾರಿಯನ್ನು ದ್ರೋಹಿ ಎಂದು ಬಣ್ಣಿಸಿದ ಅವರು, "ಸುವೇಂದು ಮಾಡಿದ ಆರೋಪದಂತೆ ತೃಣಮೂಲ ಕಾಂಗ್ರೆಸ್‌ನಲ್ಲಿ ವಂಶ ಪಾರಂಪರ್ಯ ರಾಜಕಾರಣ ಇಲ್ಲ; ಅಧಿಕಾರಿಯ ತಂದೆ, ಸಹೋದರಿ, ಸಹೋದರ ಸಂಸದರಾಗಿದ್ದಾರೆ. ಮತ್ತೊಬ್ಬ ಸಹೋದರ ಸೌಮೇದು ಅಧಿಕಾರಿ ಪಾಲಿಕೆ ಅಧ್ಯಕ್ಷ" ಎಂದು ಬಹಿರಂಗಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News