×
Ad

ಮತಾಂತರ ವಿರೋಧಿ ಕಾನೂನಿನಡಿ ಬಂಧಿತರಾಗಿದ್ದ ಸಹೋದರರಿಬ್ಬರ ಬಿಡುಗಡೆಗೆ ನ್ಯಾಯಾಲಯ ಆದೇಶ

Update: 2020-12-20 10:09 IST

ಲಕ್ನೋ, ಡಿ.20: ಉತ್ತರ ಪ್ರದೇಶ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಧಾರ್ಮಿಕ ಮತಾಂತರ ತಡೆ ಕಾಯ್ದೆಯಡಿ ಈ ತಿಂಗಳು ಬಂಧಿಸಿದ್ದ ಇಬ್ಬರನ್ನು ಶನಿವಾರ ನ್ಯಾಯಾಲಯ ಆದೇಶದ ಮೇರೆಗೆ ಬಿಡುಗಡೆ ಮಾಡಲಾಗಿದೆ.

ವಿವಾಹ, ಬಲವಂತ ಅಥವಾ ಮೋಹದ ಬಲೆ ಮೂಲಕ ಮತಾಂತರ ಮಾಡುವುದನ್ನು ತಡೆಯುವ ಸಲುವಾಗಿ ಉತ್ತರ ಪ್ರದೇಶ ಸರಕಾರ ಇತ್ತೀಚೆಗೆ ಅಧ್ಯಾದೇಶ ಹೊರಡಿಸಿತ್ತು. ಡಿಸೆಂಬರ್ 5ರಂದು ರಶೀದ್ ಅಲಿ, ಅವರ ಪತ್ನಿ ಮುಸ್ಕಾನ್ ಜಹಾನ್ (ಪಿಂಕಿ) ಅವರು ತಮ್ಮ ವಿವಾಹವನ್ನು ನೋಂದಣಿ ಮಾಡಿಸಲು ಮೊರಾದಾಬಾದ್ ನ್ಯಾಯಾಲಯಕ್ಕೆ ಆಗಮಿಸಿದ್ದಾಗ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತರು ನ್ಯಾಯಾಲಯ ಆವರಣಕ್ಕೆ ಬಂದು ಒತ್ತಾಯಪೂರ್ವಕವಾಗಿ ದಂಪತಿಯನ್ನು ಪೊಲೀಸ್ ಠಾಣೆಗೆ ಒಯ್ದಿದ್ದರು. ಆರೋಪಿ ರಶೀದ್ ತಮ್ಮ ಧಾರ್ಮಿಕ ಹಿನ್ನೆಲೆಯನ್ನು ಮರೆಮಾಚಿ ಹಿಂದೂ ವ್ಯಕ್ತಿಯಂತೆ ನಟಿಸಿ ಪಿಂಕಿಯನ್ನು ಮೋಹದ ಬಲೆಗೆ ಬೀಳಿಸಿದ್ದ ಎಂದು ಯುವತಿಯ ತಾಯಿ ಆಪಾದಿಸಿದ್ದಾಗಿ ಪೊಲೀಸರು ಹೇಳಿಕೆ ನೀಡಿದ್ದರು.

ಬಳಿಕ ರಶೀದ್ ಹಾಗೂ ಅವರ ಸಹೋದರ ಮುಹಮ್ಮದ್ ಸಲೀಂ ಅವರನ್ನು ಹೊಸ ಕಾಯ್ದೆಯ ಸೆಕ್ಷನ್ 3ರಡಿ ಬಂಧಿಸಿ, ಜಹಾನ್ ಅವರನ್ನು ಆಶ್ರಯಧಾಮಕ್ಕೆ ಸೇರಿಸಲಾಗಿತ್ತು. ರಶೀದ್ ವಿರುದ್ಧ ಯುವತಿಯ ತಾಯಿ ಮಾಡಿರುವ ಆರೋಪ ಸುಳ್ಳು ಎಂದು ಮ್ಯಾಜಿಸ್ಟ್ರೇಟ್ ಮುಂದೆ ಸ್ಪಷ್ಟಪಡಿಸಿದ್ದ ಯುವತಿ, ತನ್ನ ಸ್ವಇಚ್ಛೆಯಿಂದ ರಶೀದ್‌ನನ್ನು ವಿವಾಹವಾಗಿ ಇಸ್ಲಾಂಗೆ ಮತಾಂತರ ಹೊಂದಿರುವುದಾಗಿ ಬಹಿರಂಗಪಡಿಸಿದ್ದರು.

"ಮಹಿಳೆಯ ಹೇಳಿಕೆ ಆಧಾರದಲ್ಲಿ ನ್ಯಾಯಾಲಯ ರಶೀದ್ ಹಾಗೂ ಆತನ ಸಹೋದರನ ಬಿಡುಗಡೆಗೆ ಆದೇಶ ನೀಡಿದೆ. ವಯಸ್ಕಳಾಗಿರುವ ಆಕೆ ರಶೀದ್‌ನನ್ನು ಸ್ವ ಇಚ್ಛೆಯಿಂದ ವಿವಾಹವಾಗಿ ಯಾವುದೇ ಒತ್ತಡ ಇಲ್ಲದೇ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ" ಎಂದು ಮೊರಾದಾಬಾದ್ ಎಸ್ಪಿ ವಿ.ಎಸ್.ಮಿಶ್ರಾ ಹೇಳಿದ್ದಾರೆ.

ವೈಯಕ್ತಿಕ ಬಾಂಡ್ ಆಧಾರದಲ್ಲಿ ಇಬ್ಬರನ್ನೂ ಬಿಡುಗಡೆ ಮಾಡಲಾಗಿದ್ದು, ಪೊಲೀಸರು ತನಿಖಾ ವರದಿ ಸಲ್ಲಿಸಿದ ಬಳಿಕ ಪ್ರಕರಣ ರದ್ದುಪಡಿಸಲಾಗುವುದು ಎಂದು ಅವರು ವಿವರಿಸಿದರು.

ಡಿಸೆಂಬರ್ 15ರಂದು ಆಶ್ರಯಧಾಮದಿಂದ ಬಿಡುಗಡೆಯಾದ ಬಳಿಕ 22 ವರ್ಷದ ಮಹಿಳೆ, ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪ ಹೊರಿಸಿ, ತನ್ನ ಗರ್ಭಪಾತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News