25ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ, ಉತ್ತರಪ್ರದೇಶ ಗಡಿ ಬಂದ್ ಮಾಡುವ ಎಚ್ಚರಿಕೆ
ಹೊಸದಿಲ್ಲಿ: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇಂದು 25ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾಕಾರರು ರಾಷ್ಟ್ರರಾಜಧಾನಿ ಹಾಗೂ ಉತ್ತರಪ್ರದೇಶ ನಡುವಿನ ಗಾಝಿಪುರ ಗಡಿಯನ್ನು ಮುಚ್ಚುವ ಬೆದರಿಕೆ ಹಾಕಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡುವ ಕುರಿತು ಸರಕಾರ ಭರವಸೆ ನೀಡುತ್ತಿರುವ ನಡುವೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಶನಿವಾರ ಪ್ರಧಾನಮಂತಿ ನರೇಂದ ಮೋದಿ ಅವರು ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ನವೆಂಬರ್ ಅಂತ್ಯಕ್ಕೆ ಸಾವಿರಾರು ರೈತರು ದಿಲ್ಲಿ ಗಡಿ ಭಾಗದಲ್ಲಿ ಪ್ರತಿಭಟನೆ ಆರಂಭಿಸಿದ ಬಳಿಕ 20ಕ್ಕೂ ಅಧಿಕ ರೈತರು ಮೃತಪಟ್ಟಿದ್ದು, ಪ್ರತಿಭಟನಾಕಾರರು ಇಂದು ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಲಿದ್ದಾರೆ.
ರೈತರು ಹಾಗೂ ಕೇಂದ್ರ ಸರಕಾರದ ನಡುವೆ ಇದುವರೆಗೆ ನಡೆದಿರುವ 5 ಸುತ್ತಿನ ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಅನೌಪಾಚರಿಕ ಮಾತುಕತೆಗಳೆಲ್ಲವೂ ವಿಫಲವಾಗಿದ್ದು ರಾಷ್ಟ್ರ ರಾಜಧಾನಿ ದಿಲ್ಲಿಯ ಗಡಿಯಲ್ಲಿ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿದಿದೆ. ದಿಲ್ಲಿ ಚಲೋ, ಹೆದ್ದಾರಿ ತಡೆ, ಟೋಲ್ ಪ್ಲಾಝಾಗಳ ಬಂದ್, ಬಿಜೆಪಿ ನಾಯಕರ ಮನೆ ಮುಂದೆ ಮುಷ್ಕರ, ಭಾರತ ಬಂದ್, ಉಪವಾಸ ಸತ್ಯಾಗ್ರಹಗಳೆಲ್ಲವನೂ ಮಾಡಿರುವ ರೈತರು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ