×
Ad

ಪ್ರಧಾನಿ ಒಲಿ ತುರ್ತು ಸಭೆ, ಸಂಸತ್ ವಿಸರ್ಜನೆಗೆ ನೇಪಾಳ ಸಂಪುಟ ಶಿಫಾರಸು

Update: 2020-12-20 13:06 IST

ಪ್ರಧಾನಿ ಕೆಪಿ ಶರ್ಮ ಒಲಿ ಶಿಫಾರಸಿಗೆ ರಾಷ್ಟ್ರಪತಿ ಸಮ್ಮತಿ

ನೇಪಾಳ ಸಂಸತ್ ವಿಸರ್ಜನೆ , ಎಪ್ರಿಲ್-ಮೇಯಲ್ಲಿ ಚುನಾವಣೆ

ಕಠ್ಮಂಡು, ಡಿ.20: ನೇಪಾಳದಲ್ಲಿ ಅಧಿಕಾರಕ್ಕಾಗಿ ಹಾಲಿ ಮತ್ತು ಮಾಜಿ ಪ್ರಧಾನಿಗಳ ಮಧ್ಯೆ ಸುದೀರ್ಘಾವಧಿಯಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ರವಿವಾರ ಅನಿರೀಕ್ಷಿತ ತಿರುವು ದೊರಕಿದೆ. ಹಾಲಿ ಪ್ರಧಾನಿ ಕೆಪಿ ಶರ್ಮ ಒಲಿ ಮಾಡಿದ ಶಿಫಾರಸಿನಂತೆ ರಾಷ್ಟ್ರಪತಿ ಬಿದ್ಯಾದೇವಿ ಭಂಡಾರಿ ನೇಪಾಳ ಸಂಸತ್ತನ್ನು ವಿಸರ್ಜಿಸುವ ಘೋಷಣೆ ಮಾಡಿದ್ದಾರೆ.

ಎಪ್ರಿಲ್- ಮೇ ತಿಂಗಳಿನಲ್ಲಿ ಸಂಸತ್ತಿಗೆ ಮಧ್ಯಾವಧಿ ಚುನಾವಣೆ ನಡೆಯಲಿದೆ ಎಂದು ರಾಷ್ಟ್ರಪತಿಯವರ ಪ್ರಕಟಣೆ ತಿಳಿಸಿದೆ. ನೇಪಾಳದ ಹಾಲಿ ಪ್ರಧಾನಿ ಕೆಪಿ ಶರ್ಮ ಒಲಿ ಮತ್ತು ಮಾಜಿ ಪ್ರಧಾನಿ ಪುಷ್ಪಕಮಲ ದಹಾಲ್ ಪ್ರಚಂಡರ ಮಧ್ಯೆ ಕೆಲ ದಿನಗಳಿಂದ ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಿತ್ತು. ರವಿವಾರ ಒಲಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ತುರ್ತು ಸಭೆಯಲ್ಲಿ ಸಂಸತ್ತು ವಿಸರ್ಜನೆಗೆ ರಾಷ್ಟ್ರಪತಿಗೆ ಶಿಫಾರಸು ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಾರ್ಟಿ(ಎನ್‌ಸಿಪಿ)ಯ ಸ್ಥಾಯಿ ಸಮಿತಿಯ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.

 ಮಧ್ಯಂತರ ಚುನಾವಣೆಯ ಪ್ರಥಮ ಹಂತ ಎಪ್ರಿಲ್ 30ರಂದು ಮತ್ತು ದ್ವಿತೀಯ ಹಂತದ ಚುನಾವಣೆ ಮೇ 10ರಂದು ನಡೆಯಲಿದೆ. 275 ಸದಸ್ಯ ಬಲದ ನೇಪಾಳ ಸಂಸತ್ತಿಗೆ 2017ರಲ್ಲಿ ಚುನಾವಣೆ ನಡೆದಿದ್ದು ಹಾಲಿ ಸರಕಾರದ ಕಾರ್ಯಾವಧಿ 2022ರವರೆಗೆ ಇತ್ತು. ಎನ್‌ಸಿಪಿಯಲ್ಲೇ ಪಕ್ಷದ ಅಧ್ಯಕ್ಷ, ಹಾಲಿ ಪ್ರಧಾನಿ ಕೆಪಿ ಶರ್ಮ ಒಲಿಯ ನೇತೃತ್ವದ ಬಣ ಹಾಗೂ ಕಾರ್ಯಾಧ್ಯಕ್ಷ ಪ್ರಚಂಡ ನೇತೃತ್ವದ ಬಣದ ಸೃಷ್ಟಿಯಾಗಿದ್ದು ಕಳೆದ ವಾರ ಬಣಗಳ ತಿಕ್ಕಾಟ ಪರಾಕಾಷ್ಟೆಗೇರಿತ್ತು. ಒಲಿಯವರ ನಿರ್ಧಾರ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಮತ್ತು ನಿರಂಕುಶ ಕ್ರಮವಾಗಿದೆ ಎಂದು ಎನ್‌ಸಿಪಿಯ ವಕ್ತಾರ ನಾರಾಯಣ್‌ಕಾಜಿ ಶ್ರೇಷ್ಟ ಹೇಳಿದ್ದು, ಪ್ರಕರಣದ ಬಗ್ಗೆ ಚರ್ಚಿಸಲು ಆಡಳಿತಾರೂಢ ಪಕ್ಷದ ಸ್ಥಾಯೀ ಸಮಿತಿಯ ಸಭೆ ನಡೆಯಲಿದೆ ಎಂದಿದ್ದಾರೆ. ಇದು ಅಸಾಂವಿಧಾನಿಕ ಕ್ರಮ ಎಂದು ಎನ್‌ಸಿಪಿಯ ಹಿರಿಯ ಮುಖಂಡ, ಮಾಜಿ ಪ್ರಧಾನಿ ಮಾಧವ್ ಕುಮಾರ್ ನೇಪಾಳ ಟೀಕಿಸಿದ್ದಾರೆ. ಒಲಿಯವರ ನಿರ್ಧಾರದ ಬಗ್ಗೆ ಚರ್ಚಿಸಲು ಎನ್‌ಸಿಪಿ ಮುಖಂಡರು ಪುಷ್ಪಕುಮಾರ್ ಪ್ರಚಂಡರ ನಿವಾಸದಲ್ಲಿ ಸಭೆ ಸೇರಿರುವುದಾಗಿ ವರದಿಯಾಗಿದೆ. ಸಭೆಯಲ್ಲಿ ಮಾಧವ್ ನೇಪಾಳ, ಜಲಂತ ಖನಾಲ್, ನಾರಾಯಣ್ ಶ್ರೇಷ್ಟ ಸಹಿತ ಪ್ರಮುಖರು ಭಾಗವಹಿಸಿದ್ದರು ಎಂದು ಪ್ರಚಂಡ ಅವರ ಮಾಧ್ಯಮ ಸಲಹೆಗಾರ ಬಿಷ್ಣು ಸಪ್ಕೋತ ಹೇಳಿದ್ದಾರೆ. ಈ ಮಧ್ಯೆ, ರವಿವಾರ ಬೆಳಿಗ್ಗೆ ಒಲಿಯವರನ್ನು ಭೇಟಿಯಾಗಲು ಪ್ರಚಂಡ ಮನೆಗೆ ತೆರಳಿದ್ದರೂ ಭೇಟಿಗೆ ಅವಕಾಶ ದೊರಕಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ. ಮಾಜಿ ಪ್ರಧಾನಿ ಡಾ ಬಾಬೂರಾಮ್ ಭಟ್ಟಾರಾಯ್ ಅವರೂ ಕೆಪಿ ಶರ್ಮ ಒಲಿಯವರ ನಿರ್ಧಾರ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ. ಪ್ರಮುಖ ಪ್ರತಿಪಕ್ಷವಾದ ನೇಪಾಳಿ ಕಾಂಗ್ರೆಸ್ ರವಿವಾರ ಪಕ್ಷದ ಸದಸ್ಯರ ತುರ್ತು ಸಭೆ ಕರೆದಿದೆ.

ಅಸಾಂವಿಧಾನಿಕ ಕ್ರಮ: ತಜ್ಞರ ಅಭಿಮತ

ನೇಪಾಳದ ಸಂವಿಧಾನದ ಪ್ರಕಾರ ಪ್ರಧಾನಿ ಅಥವಾ ಬಹುಮತದ ಸರಕಾರಕ್ಕೆ ಸಂಸತ್ತನ್ನು ವಿಸರ್ಜಿಸುವ ಅವಕಾಶವಿಲ್ಲ. ಯಾವುದೇ ಪಕ್ಷಕ್ಕೂ ಹೊಸ ಸರಕಾರ ರಚಿಸಲು ಸಾಧ್ಯವಿಲ್ಲದ ಸ್ಥಿತಿ ಇಲ್ಲದಿದ್ದರೆ ಮಾತ್ರ ಸಂಸತ್ ವಿಸರ್ಜಿಸಬಹುದು. ಆದ್ದರಿಂದ ಪ್ರಚಂಡ ಅವರ ಬಣ ಈ ನಿರ್ಧಾರವಗನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ ಎಂದು ಸಂವಿಧಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News