ಡಿ.21ರಂದು ಗುರು-ಶನಿ ಗ್ರಹಗಳ ಸಮಾಗಮ
ಉಡುಪಿ, ಡಿ. 20: ಗುರು ಮತ್ತು ಶನಿ ಗ್ರಹಗಳ ಅಪರೂಪದ ಜೋಡಿಯ ಸುಂದರ ಹಾಗೂ ಅಪರೂಪದ ವಿದ್ಯಮಾನವೊಂದು ಡಿ.21ರಂದು ಸಂಜೆ ಆಕಾಶದಲ್ಲಿ ಗೋಚರಿಸಲಿದೆ. ಹೊಳೆಯುತ್ತಿರುವ ಗುರು ಮತ್ತು ಶನಿ ಗ್ರಹಗಳ ಜೋಡಿಯ ದೃಶ್ಯವು 20 ವರ್ಷಗಳ ಬಳಿಕ ನಡೆಯುತ್ತಿರುವ ಈ ವಿದ್ಯಾಮಾನ, 800 ವರ್ಷಗಳ ಬಳಿಕ ಅತ್ಯಂತ ಸಮೀಪದಲ್ಲಿ ಕಂಡುಬರುತ್ತಿದೆ.
ಭೂಮಿಯನ್ನು ಸುತ್ತುವಾಗ ಚಂದ್ರನು ಪ್ರತಿ ತಿಂಗಳು ಪ್ರತಿ ಗ್ರಹದ ಸಮೀಪದಲ್ಲಿ ಹಾದು ಹೋಗುತ್ತಾನೆ. ಈ ಸಮಯದಲ್ಲಿ ಆ ಗ್ರಹ ಹಾಗೂ ಚಂದ್ರ ಅತಿ ಸನಿಹವಿದ್ದಂತೆ ಕಾಣುತ್ತಾರೆ. ಇದನ್ನೇ ನಾವು ಜೋಡಿ ಅಥವಾ ಯುತಿ ಎಂದು ಕರೆಯುತ್ತೇವೆ. ಅದೇ ರೀತಿಯಲ್ಲಿ ಗುರು ಹಾಗು ಶನಿಯ ಸಾಮೀಪ್ಯವನ್ನು ಒಂದು ವಿಶೇಷವಾದ ವಿದ್ಯಮಾನ ಎನ್ನಬಹುದು. ಇದನ್ನು ಗ್ರೇಟ್ ಕಂಜಂಕ್ಷನ್ ಎನ್ನುತ್ತಾರೆ.
ಭೂಮಿಯಿಂದ ಸೂರ್ಯನಿಗಿರುವ ದೂರದ 5ರಷ್ಟು ದೂರದಲ್ಲಿ ಗುರುಗ್ರಹ ವಿದ್ದು ಇದು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷಗಳು ಬೇಕು. ಹಾಗೆಯೇ ಶನಿಯು, ಭೂಮಿ ಹಾಗು ಸೂರ್ಯನ ಅಂತರದ ಎರಡರಷ್ಟು ಅಂತರವಿದ್ದು, ಪರಿಭ್ರಮಿಸಲು 29.46 ವರ್ಷಗಳನ್ನು ತೆಗುದುಕೊಳ್ಳುತ್ತದೆ. ಈ ಎರಡು ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಬೇಕು. ಆದ್ದರಿಂದ ಈ ಗ್ರಹಗಳ ಯುತಿಯನ್ನು ಸಮಾಗಮ ಎಂದು ಕರೆಯಲಾಗುತ್ತದೆ.
ಈ ಜೋಡಿ ಕೇವಲ 1 ಗಂಟೆ 45 ನಿಮಿಷಗಳಷ್ಟು ಮಾತ್ರ ಕಾಣಸಿಗುತ್ತದೆ. ಎರಡು ಗ್ರಹಗಳು ಸೂರ್ಯಾಸ್ತದ ನಂತರ 6.15 ರಿಂದ ರಾತ್ರಿ 8 ಗಂಟೆಯ ವರೆಗೆ ಕಂಡು, ನಂತರ ನೈರುತ್ಯದಲ್ಲಿ 8 ಗಂಟೆಗೆ ಅಸ್ತವಾಗುತ್ತದೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಡಿ.21ರಂದು ಸಂಜೆ 6ಗಂಟೆಗೆ ಈ ಗ್ರಹಗಳ ವೀಕ್ಷಣೆಯನ್ನು ಆಯೋಜಿಸಲಾಗಿದೆ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.