ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನೀಡಿದರೆ ಆಹಾರದ ಕೂಪನ್ ಕೊಡುತ್ತಾರೆ !

Update: 2020-12-20 15:24 GMT

ಮುಂಬೈ, ಡಿ.20: ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಗೆ ಪರಿಹಾರ ಕ್ರಮ ರೂಪಿಸಿರುವ ಮಹಾರಾಷ್ಟ್ರದ ಕಲ್ಯಾಣ್ ಡೊಂಬಿವಿಲಿ ಮಹಾನಗರ ಪಾಲಿಕೆ(ಕೆಎಂಡಿಸಿ), 5 ಕಿ.ಗ್ರಾಂ ಪ್ಲಾಸ್ಟಿಕ್ ಸಂಗ್ರಹಿಸಿ ತಂದೊಪ್ಪಿಸಿದರೆ ಆಹಾರದ ಕೂಪನ್ ಉಚಿತವಾಗಿ ನೀಡುವ ಯೋಜನೆಯನ್ನು ಜಾರಿಗೊಳಿಸಿದೆ.

ಕೆಎಂಡಿಸಿಯ ಶೂನ್ಯ ತ್ಯಾಜ್ಯ ಕಾರ್ಯನೀತಿಯ ಅಂಗವಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಹಲವು ವರ್ಷಗಳಿಂದ ನಗರದಲ್ಲಿ ತ್ಯಾಜ್ಯ ವಿಲೇವಾರಿ ಬೃಹತ್ ಸಮಸ್ಯೆಯಾಗಿ ಉಳಿದುಕೊಂಡಿದೆ. ಸಮಸ್ಯೆ ನಿವಾರಣೆಗೆ ಹಲವು ಕ್ರಮಗಳನ್ನು ರೂಪಿಸಿದರೂ ಫಲ ನೀಡಿಲ್ಲ. ಆದ್ದರಿಂದ ಹೊಸ ಉಪಕ್ರಮವಾಗಿ ಪ್ಲಾಸ್ಟಿಕ್ ತಂದರೆ ಆಹಾರದ ಕೂಪನ್ ಯೋಜನೆ ಅನುಷ್ಟಾನಗೊಳಿಸಿದ್ದೇವೆ. ಅದರಂತೆ 5 ಕಿ.ಗ್ರಾಂ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಣಾ ಕೇಂದ್ರಕ್ಕೆ ತಂದೊಪ್ಪಿಸಿದರೆ 30 ರೂ. ಬೆಲೆಯ ಚಪಾತಿ ಭಾಜಿ ಖಾದ್ಯದ ಕೂಪನ್ ನೀಡಲಾಗುತ್ತದೆ ಎಂದು ಕೆಎಂಡಿಸಿಯ ತ್ಯಾಜ್ಯ ನಿರ್ವಹಣಾ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಗರದಲ್ಲಿ ಪ್ರತೀ ದಿನ ಟನ್‌ಗಟ್ಟಲೆ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು , ತ್ಯಾಜ್ಯ ನಿರ್ವಹಣೆಗೆ ಖಾಸಗಿ ಏಜೆನ್ಸಿಯ ನೆರವು ಪಡೆಯಲಾಗುತ್ತಿದೆ. ಈಗ ಕಲ್ಯಾಣ್-ಡೊಂಬಿವಿಲಿ ನಗರವನ್ನು ತ್ಯಾಜ್ಯಮುಕ್ತ ನಗರವನ್ನಾಗಿಸುವುದು ಮತ್ತು ಈ ಮೂಲಕ ದೇಶಕ್ಕೇ ಮಾದರಿಯನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಕೆಎಂಡಿಸಿ ವ್ಯಾಪ್ತಿಯ ಹಲವೆಡೆ ತ್ಯಾಜ್ಯ ಸಂಗ್ರಹಣಾ ಕೇಂದ್ರ ಸ್ಥಾಪಿಸಲಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News