ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಹೆಚ್ಚುವರಿ 16,728 ಕೋ.ರೂ.ಸಾಲವೆತ್ತಲು ಕೇಂದ್ರದ ಒಪ್ಪಿಗೆ

Update: 2020-12-20 15:34 GMT

ಹೊಸದಿಲ್ಲಿ,ಡಿ.20: ಉದ್ಯಮಸ್ನೇಹಿ ಕ್ರಮಗಳಲ್ಲಿ ನಿಗದಿತ ಸುಧಾರಣೆಗಳನ್ನು ಪೂರ್ಣಗೊಳಿಸಿರುವುದಕ್ಕಾಗಿ ಕರ್ನಾಟಕ,ಆಂಧ್ರಪ್ರದೇಶ,ತೆಲಂಗಾಣ,ತಮಿಳುನಾಡು ಮತ್ತು ಮಧ್ಯಪ್ರದೇಶ ಈ ಐದು ರಾಜ್ಯಗಳಿಗೆ ಮುಕ್ತ ಮಾರುಕಟ್ಟೆಗಳಿಂದ 16,728 ಕೋ.ರೂ.ಗಳ ಹೆಚ್ಚುವರಿ ಸಾಲವೆತ್ತಲು ಅನುಮತಿಯನ್ನು ನೀಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯವು ರವಿವಾರ ತಿಳಿಸಿದೆ.

ರಾಜ್ಯಗಳು ಹೆಚ್ಚುವರಿ ಸಾಲಗಳನ್ನು ಪಡೆದುಕೊಳ್ಳಲು ಅನುಮತಿಯೊಂದಿಗೆ ಅವು ತೆಗೆದುಕೊಳ್ಳುವ ಉದ್ಯಮ ಸ್ನೇಹಿ ಸುಧಾರಣೆಗಳನ್ನು ತಳುಕು ಹಾಕಲು ಕೇಂದ್ರವು ಕಳೆದ ಮೇ ತಿಂಗಳಿನಲ್ಲಿ ನಿರ್ಧರಿಸಿತ್ತು.

ಜಿಲ್ಲಾಮಟ್ಟದ ಉದ್ಯಮ ಸುಧಾರಣೆ ಕ್ರಿಯಾ ಯೋಜನೆಯ ಮೊದಲ ಮೌಲ್ಯಮಾಪನ,ವಿವಿಧ ಚಟುವಟಿಕೆಗಳಿಗಾಗಿ ಉದ್ಯಮಗಳು ಪಡೆದುಕೊಂಡಿರುವ ನೋಂದಣಿ ಪ್ರಮಾಣಪತ್ರಗಳು,ಅನುಮೋದನೆಗಳು ಮತ್ತು ಪರವಾನಿಗೆಗಳ ನವೀಕರಣದ ಅಗತ್ಯಗಳ ನಿವಾರಣೆ ಇವು ಈ ಸುಧಾರಣೆಗಳಲ್ಲಿ ಸೇರಿವೆ.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ರಾಜ್ಯಗಳ ಹೆಚ್ಚುವರಿ ಹಣಕಾಸು ಅಗತ್ಯಗಳನ್ನು ಈಡೇರಿಸಲು ವಿತ್ತೀಯ ಹೊಣೆಗಾರಿಕೆ ಮತ್ತು ಮುಂಗಡಪತ್ರ ವ್ಯವಸ್ಥಾಪನೆ ಕಾಯ್ದೆಯಡಿ ರಾಜ್ಯಗಳ ಜಿಡಿಪಿಯ ಶೇ.3ರಷ್ಟಿದ್ದ ಅವುಗಳ ಸಾಲ ಮಿತಿಯನ್ನು ಇನ್ನೂ ಶೇ.2ರಷ್ಟು ಹೆಚ್ಚಿಸಲು ಕೇಂದ್ರವು ಕಳೆದ ಮೇ ತಿಂಗಳಿನಲ್ಲಿ ನಿರ್ಧರಿಸಿತ್ತು. ಆದರೆ ಇದಕ್ಕಾಗಿ ರಾಜ್ಯಗಳು ‘ಒಂದು ದೇಶ ಒಂದು ಪಡಿತರ ಚೀಟಿ ’ ವ್ಯವಸ್ಥೆಯ ಅನುಷ್ಠಾನ,ಉದ್ಯಮ ಸ್ನೇಹಿ ಸುಧಾರಣೆಗಳು,ನಗರ ಸ್ಥಳೀಯ ಸಂಸ್ಥೆ/ಜನೋಪಯೋಗಿ ಸೇವೆಗಳ ಸುಧಾರಣೆಗಳು ಮತ್ತು ವಿದ್ಯುತ್ ಕ್ಷೇತ್ರ ಸುಧಾರಣೆಗಳು ಸೇರಿದಂತೆ ನಾಲ್ಕು ನಿಗದಿತ ಷರತ್ತುಗಳನ್ನು ಸೂಚಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಿವೆ. ಇಂತಹ ರಾಜ್ಯಗಳು ಪ್ರತಿ ಸುಧಾರಣೆಯನ್ನು ಪೂರ್ಣಗೊಳಿಸಲು ತಮ್ಮ ಜಿಡಿಪಿಯ ಶೇ.0.25ರಷ್ಟು ಹೆಚ್ಚುವರಿ ಸಾಲದ ಸೌಲಭ್ಯಕ್ಕೆ ಅರ್ಹವಾಗುತ್ತವೆ. ಈ ಸೌಲಭ್ಯದಡಿ ರಾಜ್ಯಗಳು ಎಲ್ಲ ನಾಲ್ಕೂ ಸುಧಾರಣೆಗಳನ್ನು ಪೂರ್ಣಗೊಳಿಸಿದರೆ 2.14 ಲ.ಕೋ.ರೂ.ವರೆಗೆ ಹೆಚ್ಚುವರಿ ಸಾಲಗಳನ್ನು ಪಡೆದುಕೊಳ್ಳಬಹುದು.

ಈವರೆಗೆ 10 ರಾಜ್ಯಗಳು ಒಂದು ದೇಶ ಒಂದು ಪಡಿತರ ಚೀಟಿ ವ್ಯವಸ್ಥೆಯನ್ನು,ಐದು ರಾಜ್ಯಗಳು ಉದ್ಯಮ ಸ್ನೇಹಿ ಕ್ರಮಗಳನ್ನು ಮತ್ತು ಎರಡು ರಾಜ್ಯಗಳು ಸ್ಥಳೀಯ ಸಂಸ್ಥೆ ಸುಧಾರಣೆಗಳನ್ನು ಪೂರ್ಣಗೊಳಿಸಿವೆ ಎಂದು ವಿತ್ತ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News