ಸರಕಾರ ತನ್ನ ವೈಫಲ್ಯಗಳ ಕುರಿತ ಪ್ರಶ್ನೆಗಳಿಂದ ಪಾರಾಗಲು ಸಂಸತ್ತಿನ ಚಳಿಗಾಲದ ಅಧಿವೇಶನ ರದ್ದುಗೊಳಿಸಿದೆ: ಸಿಪಿಎಂ

Update: 2020-12-20 16:09 GMT

ಹೊಸದಿಲ್ಲಿ,ಡಿ.20: ಕೋವಿಡ್-19ರ ಹಿನ್ನೆಲೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಿದ್ದಕ್ಕಾಗಿ ರವಿವಾರ ಸರಕಾರದ ವಿರುದ್ಧ ದಾಳಿ ನಡೆಸಿರುವ ಸಿಪಿಎಂ,ತನ್ನ ಸರ್ವಾಂಗೀಣ ವೈಫಲ್ಯಗಳ ಕುರಿತು ಪ್ರಶ್ನೆಗಳಿಂದ ನುಣುಚಿಕೊಳ್ಳಲು ಅದು ಕೊರೋನ ವೈರಸ್ ಸಾಂಕ್ರಾಮಿಕವನ್ನು ನೆಪವಾಗಿಟ್ಟುಕೊಂಡಿದೆ ಎಂದು ಹೇಳಿದೆ.

 ಇಲ್ಲಿ ಸಿಪಿಎಂ ಪಾಲಿಟ್‌ಬ್ಯೂರೊದ ಸಭೆಯ ಬಳಿಕ ಹೊರಡಿಸಲಾದ ಹೇಳಿಕೆಯಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯ ರದ್ದತಿಗೂ ಆಗ್ರಹಿಸಿರುವ ಪಕ್ಷವು, ಇದಕ್ಕಾಗಿ ಹಂಚಿಕೆ ಮಾಡಲಾಗಿರುವ ಹಣವನ್ನು ಸಂಕಷ್ಟದಲ್ಲಿರುವ ಜನತೆಗೆ ಉಚಿತ ಆಹಾರವನ್ನೊದಗಿಸಲು ಮತ್ತು ನಗದು ವರ್ಗಾವಣೆಗಳಿಗೆ ಬಳಸಿಕೊಳ್ಳಬೇಕು ಎಂದು ಹೇಳಿದೆ.

ಕೋವಿಡ್-19 ನೆಪದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಿದ್ದನ್ನು ಪಾಲಿಟ್‌ಬ್ಯೂರೋ ತೀಕ್ಷ್ಣವಾಗಿ ಖಂಡಿಸಿದೆ. ತನ್ನ ಚುನಾವಣಾ ಪ್ರಚಾರಗಳು ಮತ್ತು ರ‍್ಯಾಲಿಗಳಿಗೆ ಸಾಂಕ್ರಾಮಿಕವು ಬಿಜೆಪಿಗೆ ಸಮಸ್ಯೆಯಾಗಿರಲಿಲ್ಲ, ಆದರೆ ಸಂಸತ್ತಿಗೆ ಉತ್ತರಿಸುವುದನ್ನು ತಪ್ಪಿಸಿಕೊಳ್ಳುವುದನ್ನು ಅದು ಆಯ್ಕೆ ಮಾಡಿಕೊಂಡಿದೆ. ತನ್ಮೂಲಕ ಅದು ಸಂಸತ್ತಿನಲ್ಲಿ ಉತ್ತರದಾಯಿಯಾಗುವ ತನ್ನ ಸಾಂವಿಧಾನಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.

ಕೊರೋನ ವೈರಸ್ ಬಿಕ್ಕಟ್ಟನ್ನು ಮತ್ತು ಆರ್ಥಿಕ ಹಿಂಜರಿತವನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ತನ್ನ ವೈಫಲ್ಯಗಳ ಕುರಿತು ಪ್ರಶ್ನೆಗಳನ್ನು ಮೋದಿ ಸರಕಾರವು ತಪ್ಪಿಸಿಕೊಳ್ಳುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಇದೇ ವೇಳೆ ಅದು ಜನರ ಜೀವನೋಪಾಯಗಳ ಮೇಲೆ ದಾಳಿ ನಡೆಸುತ್ತಿದೆ ಮತ್ತು ಕಾರ್ಮಿಕರು ಹಾಗೂ ರೈತರ ಹಕ್ಕುಗಳನ್ನು ದಮನಿಸುತ್ತಿದೆ. ಜನರು ಸರಕಾರವು ಉತ್ತರಿಸುವಂತೆ ಮಾಡಲಿದ್ದಾರೆ ಎಂದು ಅದು ಹೇಳಿದೆ.

ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂಬ ಆಗ್ರಹವನ್ನು ಪುನರುಚ್ಚರಿಸಿರುವ ಹೇಳಿಕೆಯು,ಅವುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಪ್ರಶಂಸಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News