ಉಡುಪಿಯ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಚಂಪಾಷಷ್ಠಿ ಸಂಭ್ರಮ
ಉಡುಪಿ, ಡಿ.20: ಜಿಲ್ಲೆಯ ವಿವಿಧ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ರವಿವಾರ ವಿಶೇಷ ಪೂಜೆ, ಉರುಳು ಸೇವೆಯೊಂದಿಗೆ ಚಂಪಾಷಷ್ಟಿ ಸಂಪನ್ನಗೊಂಡಿತು.
ಶ್ರೀಕೃಷ್ಣ ಮಠದಲ್ಲಿ ಷಷ್ಠಿ ಉತ್ಸವ ಅಂಗವಾಗಿ ಸೋದೆ ವಾದಿರಾಜರಿಂದ ಪ್ರತಿಷ್ಠಿತ ಸುಬ್ರಹ್ಮಣ್ಯ ಪರ್ಯಾಯ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು. ಬೆಳಗ್ಗೆ ರಥಬೀದಿಯಲ್ಲಿ ಸುಬ್ರಹ್ಮಣ್ಯ ಉತ್ಸವ ಮೂರ್ತಿಯನ್ನಿಟ್ಟು ವಿಶೇಷ ರಥೋತ್ಸವ ನೆರವೇರಿಸಲಾಯಿತು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು. ಈ ಸಂದರ್ಭ ದಲ್ಲಿ 50ಕ್ಕೂ ಅಧಿಕ ಭಕ್ತರು ಉರುಳುಸೇವೆ ನಡೆಸಿದರು.
ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಗ್ಗೆ ಬೆರಳೆಣಿಕೆ ಭಕ್ತರು ಉರುಳು ಸೇವೆ ಹಾಗೂ ಎಡೆಸ್ನಾನ ನಡೆಸಿದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೇವರಿಗೆ ಮಂಗಳಾರತಿ ನೆರವೇರಿಸಿ, ಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ತಾಂಗೋಡು ಸುಬ್ರಹ್ಮಣ್ಯ ದೇವಸ್ಥಾನ, ಅರಿತೋಡು ಸುಬ್ರಹ್ಮಣ್ಯ ದೇವಸ್ಥಾನ, ಮಾಂಗೋಡು ಸುಬ್ರಹ್ಮಣ್ಯ ದೇವಸ್ಥಾನ, ಸಾಂತೂರು, ಸೂಡ, ಪಾದೆಬೆಟ್ಟು, ಪಲಿಮಾರು ಬರಮಾಡಿ, ಸಗ್ರಿ, ಗುಂಡಿಬೈಲು, ಬನ್ನಂಜೆ ನಾಗದೇವಳಗಳಲ್ಲಿ ಷಷ್ಠಿ ಉತ್ಸವ ಸಂಪನ್ನಗೊಂಡಿತು. ಬೆಳಗ್ಗೆಯಿಂದಲೇ ಹೆಚ್ಚಿನಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಹೆಚ್ಚಿನ ದೇವಸ್ಥಾನಗಳಲ್ಲಿ ಕೋವಿಡ್ ಹಿನ್ನಲೆಯಲ್ಲಿ ಅನ್ನಸಂತರ್ಪಣೆ ರದ್ದು ಮಾಡಲಾಗಿದ್ದು, ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು. ಉರುಳು ಸೇವೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.