×
Ad

ಭಟ್ಕಳ ಸಮೀಪದ ಸಮುದ್ರದಲ್ಲಿ ದೋಣಿ ಪಲ್ಟಿ: ಮೀನುಗಾರನ ರಕ್ಷಣೆ

Update: 2020-12-21 20:14 IST

ಉಡುಪಿ, ಡಿ.21: ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯ ಅಳ್ವೆಕೋಡಿ ಕಾಕಿಗುಡ್ಡ ದ್ವೀಪದ ಹತ್ತಿರದ ಸಮುದ್ರದಲ್ಲಿ ದೋಣಿ ಮಗುಚಿ ಬಿದ್ದು ನೀರಿನಲ್ಲಿ ಮುಳುಗುತ್ತಿದ್ದ ಮೀನುಗಾರರೊಬ್ಬರನ್ನು ಕರಾವಳಿ ಕಾವಲು ಪೊಲೀಸರು ರಕ್ಷಿಸಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಸಣಭಾವಿ ಗ್ರಾಮದ ಮಂಜು ಮೊಗೇರ ಯಾದವ(32) ರಕ್ಷಿಸಲ್ಪಟ್ಟ ಮೀನು ಗಾರ. ಇವರು ಬೆಳಗಿನ ಜಾವ ತನ್ನ ಪಾತಿ ದೋಣಿಯಲ್ಲಿ ಮೀನು ಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಗಾಳಿ ರಭಸಕ್ಕೆ ಪಾತಿ ದೋಣಿ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ನೀರಿಗೆ ಬಿದ್ದ ಯಾದವ, ಸಮುದ್ರದಲ್ಲಿ ಈಜುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ದೊರೆತ ಸಿಎಸ್‌ಪಿ ಠಾಣೆಯ ಇಂಟರ್‌ಸೆಪ್ಟರ್ ಬೋಟಿ ನಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದ ಬೋಟ ಕ್ಯಾಪ್ಟನ್ ಮಲ್ಲಪ್ಪ ಮುದಿಗೌಡರ, ಸಿಪಿಸಿ ದಿನೇಶ ನಾಯ್ಕ, ಕಲಾಸಿ ಸಂಜೀವ ನಾಯಕ ಮತ್ತು ಕೆಎನ್‌ಡಿ ಜನಾರ್ದನ ಮೊಗೇರ ಸ್ಥಳಕ್ಕೆ ಧಾವಿಸಿದರು. ಅಲ್ಲಿ ನೀರಿನಲ್ಲಿದ್ದ ಮೀನುಗಾರ ಯಾದವ ಹಾಗೂ ಪಾತಿ ದೋಣಿ, ಬಲೆಯನ್ನು ರಕ್ಷಣೆ ಮಾಡಲಾಯಿತು. ಬಳಿಕ ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿ, ಅಳ್ವೆಕೋಡಿ ಜೆಟಿ್ಟಗೆ ಕರೆದು ಕೊಂಡು ಬರಲಾಯಿತು.

ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಎಸ್‌ಪಿ ಭಟ್ಕಳ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದು, ಇವರನ್ನು ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News