ದ.ಕ. ಜಿಲ್ಲೆ : ಮೂರು ತಾಲೂಕುಗಳಲ್ಲಿ ಡಿ.22ಕ್ಕೆ ಚುನಾವಣೆ
ಮಂಗಳೂರು, ಡಿ.21: ದ.ಕ. ಜಿಲ್ಲೆಯಲ್ಲಿ ಡಿ.22ಕ್ಕೆ ನಡೆಯಲಿರುವ ಒಂದನೇ ಹಂತದ ಗ್ರಾಪಂ ಚುನಾವಣೆಗೆ ಮೂರು ತಾಲೂಕುಗಳು ಸನ್ನದ್ಧವಾಗಿವೆ. 106 ಗ್ರಾಮ ಪಂಚಾಯತ್‌ಗಳ 1,681 ಸ್ಥಾನಗಳ ಪೈಕಿ 50 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 1,631 ಸ್ಥಾನಗಳಿಗೆ 3,854 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಒಂದನೇ ಹಂತದದಲ್ಲಿ ಮಂಗಳೂರು, ಮೂಡುಬಿದಿರೆ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಗ್ರಾಪಂ ಚುನಾವಣೆ ನಡೆಯಲಿದೆ. ಕಣದಲ್ಲಿ ಇರುವ ವರಲ್ಲಿ 2,058 ಪುರುಷರು ಮತ್ತು 1,796 ಮಹಿಳೆಯರು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ 238 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಪರಿಶಿಷ್ಟ ಪಂಗಡ ಕ್ಷೇತ್ರದಿಂದ 215 ಅಭ್ಯರ್ಥಿಗಳು ಮತ್ತು ಹಿಂದುಳಿದ ‘ಅ’ ವರ್ಗದಿಂದ 958 ಸ್ಪರ್ಧಿಸುತ್ತಿದ್ದಾರೆ. ಹಿಂದುಳಿದ ‘ಬಿ’ ವರ್ಗದಿಂದ 226 ಮಂದಿ ಕಣದಲ್ಲಿದ್ದಾರೆ.
ಮಂಗಳೂರು ತಾಲೂಕಿನಿಂದ 28 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಂಟ್ವಾಳದಿಂದ 15 ಮಂದಿ ಮತ್ತು ಮೂಡುಬಿದಿರೆಯಿಂದ 7 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಸ್ಟರಿಂಗ್: ಪ್ರಥಮ ಹಂತದ ಚುನಾವಣೆಗೆ ಸೋಮವಾರ ಮಂಗಳೂರಿನ ಬೊಂದೇಲ್‌ನ ಮಹಾತ್ಮ ಗಾಂಧೀಜಿ ಪ್ರೌಢಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಚುನಾವಣೆ ಸಿಬ್ಬಂದಿ ಮತಪೆಟ್ಟಿಗೆ ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ಮತದಾನ ಕೇಂದ್ರಕ್ಕೆ ಕೊಂಡೊಯ್ದರು.
ದ್ವಿತೀಯ ಹಂತದಲ್ಲಿ ಡಿ.27ರಂದು ಬೆಳ್ತಂಗಡಿ, ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕಿನ 114 ಗ್ರಾಪಂಗಳ 1,541 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.