ಕೆಎಂಸಿ ಆಸ್ಪತ್ರೆಗೆ ರಾ.ಗುಣಮಟ್ಟ ಮಂಡಳಿಯಿಂದ ‘ವಾಶ್’ ಪ್ರಮಾಣಪತ್ರ
ಮಣಿಪಾಲ ಡಿ.21: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ರಾಷ್ಟ್ರೀಯ ಆಸ್ಪತ್ರೆ ಮತ್ತು ಆರೋಗ್ಯ ಪೂರೈಕದಾರರ ಮಾನ್ಯತೆ ಪಡೆದ ಸಂಘ (ಎನ್‌ಎಬಿಎಚ್) ಹಾಗೂ ಭಾರತೀಯ ಗುಣಮಟ್ಟ ಮಂಡಳಿ (ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ)ಯಿಂದ ‘ವಾಶ್’(ಸುರಕ್ಷತೆ ಮತ್ತು ನೈರ್ಮಲ್ಯಕ್ಕಾಗಿ ಕಾರ್ಯಸ್ಥಳದ ಮೌಲ್ಯಾಪನ) ಪ್ರಮಾಣ ಪತ್ರ ದೊರೆತಿದೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಇವರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಯ ಸೋಂಕು ನಿಯಂತ್ರಣ ಸಮಿತಿ ಮುಖ್ಯಸ್ಥ ಡಾ.ಮುರಳೀಧರ ವರ್ಮಾ ಮತ್ತವರ ತಂಡಕ್ಕೆ ಪ್ರವಾಣ ಪತ್ರವನ್ನು ಹಸ್ತಾಂತರಿಸಿದರು.
ಕೆಎಂಸಿ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ, ಗುಣಮಟ್ಟ ಅನುಷ್ಠಾನದ ಸಲಹೆಗಾರ ಡಾ. ಸುನೀಲ್ ಮುಂಡ್ಕೂರು ಹಾಗೂ ಜಿಬು ಥೋಮಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದು ಕೆಎಂಸಿ ಆಸ್ಪತ್ರೆಯ ಗುಣಮಟ್ಟ ಮತ್ತು ಮಾನ್ಯತೆಗಳ ಕಿರೀಟಕ್ಕೆ ಮತ್ತೊಂದು ಗರಿಯಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಕೋವಿಡ್-19 ಸಾಂಕ್ರಾಮಿಕದ ನಿರಂತರ ಆರೈಕೆ ಸಮಯದಲ್ಲಿ ಆಸ್ಪತ್ರೆಗೆ ನಿಗದಿಪಡಿಸಿದ ಸೋಂಕು ನಿಯಂತ್ರಣ ಪ್ರಕ್ರಿಯೆ ಮತ್ತು ಶಿಷ್ಟಾಚಾರಗಳಿಗಾಗಿ ಎನ್‌ಎಬಿಎಚ್ ಅಧ್ಯಯನದಡಿಯಲ್ಲಿ ಕೆಎಂಸಿ ಆಸ್ಪತ್ರೆಯನ್ನು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಮೌಲ್ಯಮಾಪನ ಮಾಡಿ ಪ್ರಮಾಣೀಕರಿಸಿದೆ.
ಈ ಪ್ರಮಾಣೀಕರಣ ಸಾಂಕ್ರಾಮಿಕ ಸಮಯದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಳವಡಿಸಿದ ಸುರಕ್ಷತಾ ಕ್ರಮಗಳು, ಅಲ್ಲದೇ ವೈದ್ಯರು, ನರ್ಸ್‌ಗಳು, ಪ್ಯಾರಾಮೆಡಿಕಲ್ ಸಿಬ್ಬಂದಿ, ಸ್ವಚ್ಛತಾ ಮತ್ತು ಇತರ ಸೇವಾ ವಿಭಾಗ ಗಳು ಸೇರಿದಂತೆ ವೈದ್ಯಕೀಯ ಆರೈಕೆ ನೀಡುವ ಸಿಬ್ಬಂದಿಗಳು ಸೋಂಕಿನ ಹರಡುವಿಕೆ ತಡೆಯಲು ಕೈಗೊಂಡ ಕ್ರಮಗಳಿಗೆ ಸಂಬಂಧಿಸಿ ನೀಡಿದ ಮೆಚ್ಚುಗೆಯಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.