ಉಳ್ಳಾಲ: ಮುನ್ನೂರು ಮತಗಟ್ಟೆಯಲ್ಲಿ ಮೊಂಬತ್ತಿ ಬೆಳಕಿನಲ್ಲಿ ಮತದಾನ!

Update: 2020-12-22 10:35 GMT

ಉಳ್ಳಾಲ, ಡಿ.22: ಮುನ್ನೂರು ಶಾಲೆಯ ಮಗತಟ್ಟೆಯಲ್ಲಿ ಇಂದು ಬೆಳಗ್ಗೆ ಕೆಲಹೊತ್ತು ಮೊಂಬತ್ತಿ ಬೆಳಕಿನಲ್ಲಿ ಮತದಾನ ಮಾಡಿರುವ ಘಟನೆ ವರದಿಯಾಗಿದೆ.

ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭಗೊಂಡಿದ್ದರೂ ವಿದ್ಯುತ್ ಕೈಕೊಟ್ಟಿದ್ದರಿಂದ ಮತದಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಅಧಿಕಾರಿಗಳು ಮತ್ತು ಊರವರು ಸೇರಿ ಮೊಂಬತ್ತಿ ವ್ಯವಸ್ಥೆ ಕಲ್ಪಿಸಿ ಕೆಲಕಾಲ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದರು. ಆದರೂ ಸುಗಮ ಚುನಾವಣೆಗೆ ತೊಂದರೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಊರವರು ಮೆಸ್ಕಾಂ ಅಧಿಕಾರಿಗಳ ಗಮನಸೆಳೆದರು. ಮೆಸ್ಕಾಂ ಅಧಿಕಾರಿಗಳು ತಕ್ಷಣ ಸ್ಪಂದಿಸಿ ತಾತ್ಕಾಲಿಕವಾಗಿ ಜನರೇಟರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. 

ಅನಿರೀಕ್ಷಿತ ವಿದ್ಯುತ್ ವ್ಯತ್ಯಯದಿಂದ ಅಂಬ್ಲಮೊಗರು ಮತ್ತು ಕುತ್ತಾರು ಮತಗಟ್ಟೆಯಲ್ಲೂ ಮತದಾನಕ್ಕೆ ಸಮಸ್ಯೆಯಾಗಿತ್ತು. ಅಂಬ್ಲಮೊಗರುವಿನಲ್ಲಿ ಮಾಡಿನ ಹಂಚು ತೆಗೆದು ಬೆಳಕಿನ ವ್ಯವಸ್ಥೆ ಮಾಡಲಾಯಿತು.

ಅಂಬ್ಲಮೊಗರುವಿನ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಜಂಪರ್ ತುಂಡಾಗಿದ್ದರಿಂದ ಆದ ತಾಂತ್ರಿಕ ದೋಷವೇ ವಿದ್ಯುತ್ ಕಡಿತಗೊಳ್ಳಲು ಕಾರಣ ಎನ್ನಲಾಗಿದೆ. ಬಳಿಕ ಮೆಸ್ಕಾಂ ಅಧಿಕಾರಿಗಳು ಕೊಣಾಜೆ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ ಸಮಸ್ಯೆ ಪರಿಹರಿಸಿದ್ದಾರೆ. ಆದರೆ ವಿದ್ಯುತ್ ಸಮಸ್ಯೆಯಿಂದಾಗಿ ಮತದಾನ ಅಲ್ಪಕಾಲ ವಿಳಂಬವಾಗಿ ನಡೆಯಿತು ಎಂದು ತಿಳಿದುಬಂದಿದೆ

ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿರುವ ಮೆಸ್ಕಾಂ, ಉಳ್ಳಾಲ ವಲಯದ ಜ್ಯೂನಿಯರ್ ಇಂಜಿನಿಯರ್ ನಿತೀಶ್, ''ಉಳ್ಳಾಲದಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಅಂಬ್ಲಮೊಗರುವಿನಿಂದ ವಿದ್ಯುತ್ ಪ್ರಸರಣ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಅಂಬ್ಲಮೊಗರು ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಲೋಡ್ ಅಧಿಕಗೊಂಡ ಪರಿಣಾಮ ಜಂಪರ್ ಕಟ್ ಆಗಿ ವಿದ್ಯುತ್ ಕಡಿತವಾಗಿತ್ತು. ಈ ಮಾಹಿತಿ ದೊರೆತ ತಕ್ಷಣ ಮುನ್ನೂರು ಮತಗಟ್ಟೆ ಗೆ ಜನರೇಟರ್ ವ್ಯವಸ್ಥೆ ಮಾಡಲಾಗಿದೆ. ಬಳಿಕ ಕೊಣಾಜೆ ವಿದ್ಯುತ್ ಪ್ರಸರಣ ಕೇಂದ್ರ ದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಲಾಗಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News