ಬಂಧಿತ ಪಿಡಿಪಿ ನಾಯಕ ಪಾರಾಗೆ ಡಿಡಿಸಿ ಚುನಾವಣೆಯಲ್ಲಿ ಗೆಲುವು
ಶ್ರೀನಗರ,ಡಿ.22: ಜಮ್ಮು-ಕಾಶ್ಮೀರದಲ್ಲಿ ಮೊಟ್ಟಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗಳಿಗೆ ನಾಮಪತ್ರ ಸಲ್ಲಿಸಿದ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯಿಂದ ಬಂಧಿಸಲ್ಪಟ್ಟು ದಿಲ್ಲಿಯ ತಿಹಾರ್ ಜೈಲಿನಲ್ಲಿರುವ ಪಿಡಿಪಿಯ ಯುವ ಘಟಕದ ಅಧ್ಯಕ್ಷ ವಹೀದ್ ಪಾರಾ(32) ಅವರು ದ.ಕಾಶ್ಮೀರದ ಪುಲ್ವಾಮಾದ ತಹಾಬ್ ಕೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಟ್ವಿಟರ್ ಮೂಲಕ ಪಾರಾರನ್ನು ಅಭಿನಂದಿಸಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು, ನಾಮಪತ್ರ ಸಲ್ಲಿಕೆಯ ಬಳಿಕ ಬಂಧಿಸಲ್ಪಟ್ಟಿದ್ದರೂ ಜನರು ಪರ್ರಾ ಬಗ್ಗೆ ತಮ್ಮ ಪ್ರೀತಿ ಮತ್ತು ವಿಶ್ವಾಸವನ್ನು ತೋರಿಸಿದ್ದಾರೆ. ನ್ಯಾಯ ಉಳಿಯುತ್ತದೆ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಉಗ್ರರೊಂದಿಗೆ ನಂಟು ಹೊಂದಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟು ಅಮಾನತು ಗೊಂಡಿರುವ ಜಮ್ಮು-ಕಾಶ್ಮೀರದ ಪೊಲೀಸ್ ಅಧಿಕಾರಿ ದವಿಂದರ್ ಸಿಂಗ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಪಾರಾ ಅವರನ್ನು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿಸಲಾಗಿದೆ.
ಪಾರಾ ಪ್ರಜಾಪ್ರಭುತ್ವದ ಹೋರಾಟಗಾರರಾಗಿದ್ದಾರೆ ಎಂದು ಬಣ್ಣಿಸಿರುವ ಅವರ ಕುಟುಂಬವು,ಡಿಡಿಸಿ ಚುನಾವಣಾ ಫಲಿತಾಂಶವು ಇದನ್ನು ಸಿದ್ಧಪಡಿಸಿದೆ ಎಂದಿದೆ.