×
Ad

ಉಡುಪಿ : ಬ್ರಿಟನ್‌ನಿಂದ ಬಂದ 8 ಮಂದಿಗೆ ಕೋವಿಡ್ ಪರೀಕ್ಷೆ

Update: 2020-12-22 19:49 IST

 ಉಡುಪಿ : ಬ್ರಿಟನ್‌ನಲ್ಲಿ ರೂಪಾಂತರಗೊಂಡ ಕೊರೋನ ವೈರಸ್ ಮತ್ತೊಂದು ಸುತ್ತಿನ ಕೋವಿಡ್ ಅಲೆಯನ್ನು ಎಬ್ಬಿಸುವ ಭೀತಿಯ ಹಿನ್ನೆಲೆಯಲ್ಲಿ ಬ್ರಿಟನ್ ಹಾಗೂ ಇತರ ದೇಶಗಳಿಂದ ಉಡುಪಿ ಜಿಲ್ಲೆಗೆ ಬಂದ ಎಂಟು ಮಂದಿಯನ್ನು ಇಂದು ಪರೀಕ್ಷೆಗೊಳಪಡಿಸಿದ್ದು, ಎಲ್ಲರನ್ನೂ ಸದ್ಯ ಹೋಮ್ ಕ್ವಾರಂಟೈನ್‌ನಲ್ಲಿರಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಬ್ರಿಟನ್ ಸೇರಿದಂತೆ ವಿದೇಶಗಳಿಂದ ಬಂದ ಎಂಟು ಮಂದಿಯ ವಿವರವನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದ್ದು, ಅವರೆಲ್ಲರನ್ನೂ ಇಂದು ಪರೀಕ್ಷೆಗೆ ಕರೆಸಿ ಅವರ ಸ್ಕ್ವಾಬ್‌ನ್ನು ಪರೀಕ್ಷೆಗೆ ಪಡೆಯಲಾಗಿದೆ. ಎಲ್ಲರನ್ನೂ ಕಟ್ಟುನಿಟ್ಟಿನ ಹೋಮ್ ಕ್ವಾರಂಟೈನ್‌ನಲ್ಲಿರಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಪರೀಕ್ಷಾ ವರದಿ ನಾಳೆ ಬರುವ ನಿರೀಕ್ಷೆ ಇದೆ. ಅಲ್ಲಿಯವರೆಗೆ ಅವರು ಹೋಮ್ ಕ್ವಾರಂಟೈನ್‌ನಲ್ಲಿರುತ್ತಾರೆ. ನಾಳೆ ಪರೀಕ್ಷಾ ವರದಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸೋಮವಾರ ಬಂದವರು: ಜಿಲ್ಲೆಗೆ ಆಗಮಿಸಿದ ಎಂಟು ಮಂದಿಯಲ್ಲಿ ಒಬ್ಬರು ಕುಂದಾಪುರ ತಾಲೂಕಿನವರು, ನಾಲ್ವರು ಉಡುಪಿ ತಾಲೂಕಿನ ವರು ಹಾಗೂ ಮೂವರು ಕಾರ್ಕಳ ತಾಲೂಕಿನವರು. ಇವರಲ್ಲಿ ಐದು ಮಂದಿ ಬ್ರಿಟನ್‌ನ ಲಂಡನ್‌ನಿಂದ ಬಂದಿದ್ದರೆ, ಇಬ್ಬರು ಕೆನಡಾದ ಟೊರೆಂಟೊದಿಂದ ಹಾಗೂ ಒಬ್ಬರು ಐರ್ಲೆಂಡ್‌ನ ಡಬ್ಲಿನ್‌ನಿಂದ ಆಗಮಿಸಿದ್ದಾರೆ ಎಂದು ಡಿಎಚ್‌ಓ ಡಾ.ಸುಧೀರ್ ಚಂದ್ರ ಸೂಡ ಪತ್ರಿಕೆಗೆ ತಿಳಿಸಿದ್ದಾರೆ.

ಇವರೆಲ್ಲರೂ ನಿನ್ನೆಯಷ್ಟೇ ಬೆಂಗಳೂರು ಮೂಲಕ ಮಂಗಳೂರಿಗೆ ಬಂದು ಅಲ್ಲಿಂದ ಜಿಲ್ಲೆಗೆ ಆಗಮಿಸಿದ್ದಾರೆ. ರಾಜ್ಯಕ್ಕೆ ಒಟ್ಟು 138 ಮಂದಿ ಬ್ರಿಟನ್ ಹಾಗೂ ಇತರ ದೇಶಗಳಿಂದ ಬಂದಿರುವ ಮಾಹಿತಿಗಳಿವೆ. ಅವರ ಬಗ್ಗೆ ನಾಳೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಬ್ರಿಟನ್‌ನಿಂದ ಬಂದವರಿಗೆಲ್ಲಾ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ ಇದರಲ್ಲಿ ಪಾಸಿಟಿವ್ ಬಂದವರಿಗೆ ಸರಕಾರ ಸ್ಥಾಪಿಸಿರುವ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸ ಬೇಕು ಎಂದು ಕೇಂದ್ರ ಸರಕಾರ ನಿನ್ನೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News