×
Ad

ವನ್ಯಜೀವಿಗಳ ಸಂರಕ್ಷಣೆ : ಪಿಲಿಕುಳದಲ್ಲಿ ವನ್ಯಜೀವಿ ದತ್ತು ಪಡೆದ ಎಂಆರ್‌ಪಿಎಲ್

Update: 2020-12-22 20:19 IST

ಮಂಗಳೂರು, ಡಿ.22: ಎಂಆರ್‌ಪಿಎಲ್ ತನ್ನ ಸಾಂಸ್ಥಿಕ ಪರಿಸರ ಜವಾಬ್ದಾರಿ ಯೋಜನೆಯಡಿ ಮಂಗಳೂರಿನ ವನ್ಯಜೀವಿ ಸಂರಕ್ಷಣೆಯ ಉದ್ದೇಶ ವನ್ನು ಬೆಂಬಲಿಸಿದೆ.

ಎಂಆರ್‌ಪಿಎಲ್ ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಮಂಗಳೂರು ಡಿ.22ರಂದು ಪಿಲಿಕುಳದ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿಗಳನ್ನು 12 ತಿಂಗಳ ಅವಧಿಗೆ ದತ್ತು ಪಡೆವ ಒಪ್ಪಂದಕ್ಕೆ ಸಹಿ ಹಾಕಿದರು.

ಎಂಆರ್‌ಪಿಎಲ್‌ನ ರಿಫೈನರಿ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎಲಾಂಗೊ ಮತ್ತು ಪಿಲಿಕುಳದ ಕಾರ್ಯನಿರ್ವಾಹಕ ನಿರ್ದೇಶಕ ಗೋಕುಲದಾಸ ನಾಯಕ್ ಸಹಿ ಹಾಕಿದರು. ಈ ಸಂದಭದಲ್ಲಿ ಎಂಆರ್‌ಪಿಎಲ್‌ನ ಸಿಇಒ ರಾಜೀವ್ ಕುಶ್ವಾ, ಸಂಸ್ಕರಣಾಗಾರದ ನಿರ್ದೇಶಕ ಸಂಜಯ್ ವರ್ಮಾ, ಹಣಕಾಸು ವಿಭಾಗದ ನಿರ್ದೇಶಕ ಪೊಮಿಲಾ ಜಸ್ಪಾಲ್, ಬಿಎಚ್‌ವಿ ಪ್ರಸಾದ್, ಪಿಲಿಕುಳದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ, ಪಿಲಿಕುಳದ ಆಡಳಿತಾಧಿಕಾರಿ ಬಾಬು ದೇವಾಡಿಗ, ಸುದರ್ಶನ್ ಎಂ.ಎಸ್., ಕೃಷ್ಣ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಎಂಆರ್‌ಪಿಎಲ್‌ನ ರೂ. 4.16 ಕೋಟಿ ರೂ.ನ್ನು ಮುಖ್ಯವಾಗಿ 1,200 ಕಾಡು ಪ್ರಾಣಿಗಳಿಗೆ ಮೇವು ಒದಗಿಸಲು, ಪಶು ವೈದ್ಯಕೀಯ ಸೌಲಭ್ಯ ಗಳು ಮತ್ತು ಪ್ರಾಣಿಗಳಿಗೆ ಔಷಧಿಗಳನ್ನು ಒದಗಿಸಲು ಬಳಸಲಾಗುತ್ತದೆ.

ದೇಶಾದ್ಯಂತ ಕೋವಿಡ್ ಲಾಕ್‌ಡೌನ್‌ನ ಪರಿಣಾಮ ಪಿಲಿಕುಳದ ಆದಾಯದ ನಷ್ಟಕ್ಕೆ ಕಾರಣವಾಗಿದೆ. ಪಿಲಿಕುಳದಲ್ಲಿ ಆಶ್ರಯ ಪಡೆದಿರುವ 1,200ಕ್ಕೂ ಹೆಚ್ಚು ವನ್ಯಜೀವಿಗಳನ್ನು ರಕ್ಷಿಸಲು ಮತ್ತು ಆಹಾರ ವ್ಯವಸ್ಥೆಗಾಗಿ, ದ.ಕ. ಜಿಲ್ಲಾಧಿಕಾರಿ ಶಿಫಾರಸಿನ ಮೇರೆಗೆ ಎಂಆರ್‌ಪಿಎಲ್ ತನ್ನ ಸಿಇಆರ್ ಅಡಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿತು.

ಎಂಆರ್‌ಪಿಎಲ್ ಸಂಸ್ಥೆಯು 2016ರಿಂದ ಪಿಲಿಕುಳ ಜೈವಿಕ ಉದ್ಯಾನವನದೊಂದಿಗೆ ಸಂಬಂಧ ಹೊಂದಿದೆ. ಇದರಲ್ಲಿ ಪಿಲಿಕುಳದಲ್ಲಿ 20 ಎಕರೆ ಪ್ರದೇಶದಲ್ಲಿ 2,000 ಸಸ್ಯಗಳನ್ನು ನೆಡುವ ಮೂಲಕ ಗ್ರೀನ್ ಬೆಲ್ಟ್ ರಚಿಸಲು ಒಪ್ಪಂದ ಮಾಡಿಕೊಳ್ಳಲಾಯಿತು. 30 ಎಕರೆ ಪ್ರದೇಶದಲ್ಲಿ ಇನ್ನೂ 2,000 ಸಸ್ಯಗಳನ್ನು ನೆಡಲು 2017ರಲ್ಲಿ ಮತ್ತೊಂದು ಒಪ್ಪಂದವನ್ನು ಸೇರ್ಪಡೆಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News