‘ಐತಿಹಾಸಿಕ ತಾರತಮ್ಯ’ಕ್ಕಾಗಿ ಕರಿಯ ವರ್ಣೀಯರ ಕ್ಷಮೆ ಕೋರಿದ ಪತ್ರಿಕೆ
ವಾಶಿಂಗ್ಟನ್, ಡಿ. 22: ಕರಿಯ ಅಲ್ಪಸಂಖ್ಯಾತರ ಬಗ್ಗೆ ದಶಕಗಳಿಂದ ಜನಾಂಗೀಯವಾದಿ ಹಾಗೂ ತಾರತಮ್ಯಕಾರಿ ವರದಿಗಳನ್ನು ಪ್ರಕಟಿಸಿರುವುದಕ್ಕಾಗಿ ಅಮೆರಿಕದ ‘ಕ್ಯಾನ್ಸಸ್ ಸಿಟಿ ಸ್ಟಾರ್’ ಪತ್ರಿಕೆಯ ಸಂಪಾದಕ ಮೈಕ್ ಫನಿನ್ ಸೋಮವಾರ ಪತ್ರಿಕೆಯ ಪರವಾಗಿ ಕ್ಷಮೆ ಕೋರಿದ್ದಾರೆ.
ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ರನ್ನು ಪೊಲೀಸರು ಮೇ ತಿಂಗಳಲ್ಲಿ ಗುಂಡು ಹಾರಿಸಿ ಕೊಂದ ಬಳಿಕ, ಅಮೆರಿಕ ಹಾಗೂ ಜಗತ್ತಿನಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಈ ಘಟನೆಯು, ಕರಿಯ ವರ್ಣೀಯರ ಬಗ್ಗೆ ತಾನು ತಳೆದಿದ್ದ ಐತಿಹಾಸಿಕ ನಿಲುವನ್ನು ಬದಲಿಸುವಂತೆ ಪತ್ರಿಕೆಯನ್ನು ಪ್ರೇರೇಪಿಸಿದೆ ಎಂದು ಪತ್ರಿಕೆಯ ಪ್ರಧಾನ ಸಂಪಾದಕ ಮೈಕ್ ಫನಿನ್ ಸಿಎನ್‌ಎನ್ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದರು.
‘‘ಪತ್ರಿಕೆಯು ದಶಕಗಳ ಕಾಲ ಕರಿಯ ವರ್ಣೀಯರ ಬಗ್ಗೆ ಹೇಗೆ ವರದಿ ಮಾಡಿತು ಎನ್ನುವುದನ್ನು ತಿಳಿದುಕೊಳ್ಳಲು ನಾವೆಂದೂ ಪ್ರಯತ್ನಿಸಲಿಲ್ಲ’’ ಎಂದರು.
ಫನಿನ್ ರವಿವಾರ ಪತ್ರಿಕೆಯ ಇತಿಹಾಸದ ಬಗ್ಗೆ ‘ದ ಸ್ಟೋರಿ ಆಫ್ ಎ ಪವರ್‌ಫುಲ್ ಲೋಕಲ್ ಬಿಝ್ನೆಸ್ ದ್ಯಾಟ್ ಹ್ಯಾಸ್ ಡನ್ ರಾಂಗ್’ (ತಪ್ಪು ಮಾಡಿದ ಪ್ರಭಾವಿ ಸ್ಥಳೀಯ ಉದ್ಯಮವೊಂದರ ಕತೆ) ಎಂಬ ತಲೆಬರಹದಲ್ಲಿ ಸುದೀರ್ಘ ಸಂಪಾದಕೀಯವನ್ನು ಪ್ರಕಟಿಸಿದ್ದಾರೆ.
ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆಗಳು ನಡೆದ ಬಳಿಕ, ಅಮೆರಿಕವು ತನ್ನ ಗುಲಾಮಗಿರಿ, ವರ್ಣಭೇದ ಮತ್ತು ವ್ಯವಸ್ಥಿತ ಜನಾಂಗೀಯ ತಾರತಮ್ಯ ಧೋರಣೆಯ ಇತಿಹಾಸದತ್ತ ತಿರುಗಿ ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆಯು ಕ್ಷಮೆ ಕೋರಿದೆ.
‘‘140 ವರ್ಷಗಳ ಕಾಲ ಕ್ಯಾನ್ಸಸ್ ನಗರ ಮತ್ತು ವಲಯವನ್ನು ರೂಪಿಸಿದ ಅತ್ಯಂತ ಪ್ರಭಾವಶಾಲಿ ಶಕ್ತಿಗಳಲ್ಲಿ ಪತ್ರಿಕೆಯೂ ಒಂದು. ಆದರೂ, ತನ್ನ ಆರಂಭಿಕ ಇತಿಹಾಸದ ಹೆಚ್ಚಿನ ಅವಧಿಯಲ್ಲಿ ತನ್ನ ಕೃತ್ಯಗಳ ಮೂಲಕ ಪತ್ರಿಕೆಯು ಕ್ಯಾನ್ಸಸ್‌ನ ಕರಿಯ ನಾಗರಿಕರ ತಲೆಮಾರುಗಳನ್ನು ಹಕ್ಕುವಂಚಿತರನ್ನಾಗಿಸಿದೆ ಹಾಗೂ ಅವರನ್ನು ನಿರ್ಲಕ್ಷಿಸಿದೆ’’ ಎಂದು ಸಂಪಾದಕೀಯ ಹೇಳಿದೆ.