×
Ad

ರೂಪಾಂತರಿತ ಕೊರೋನ ಭಾರತದಲ್ಲಿ ಪತ್ತೆಯಾಗಿಲ್ಲ: ಕೇಂದ್ರ ಸ್ಪಷ್ಟನೆ

Update: 2020-12-22 22:10 IST

ಹೊಸದಿಲ್ಲಿ,ಡಿ.22: ಬ್ರಿಟನ್‌ನಲ್ಲಿ ಪತ್ತೆ.ಯಾಗಿರುವಂತಹ ರೂಪಾಂತರಗೊಂಡ ಹಾಗೂ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವಿರುವ ಕೊರೋನ ವೈರಸ್‌ನ ಹೊಸ ಪ್ರಭೇದವು ಭಾರತದಲ್ಲಿ ಈವರೆಗೆ ಕಂಡುಬಂದಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

ಕೇಂದ್ರ ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಭಾರತದಲ್ಲಿ ಹಾಗೂ ಇತರ ದೇಶಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳ ಸಾಮರ್ಥ್ಯದ ಮೇಲೆ ರೂಪಾಂತರಿತ ಕೊರೋನ ವೈರಸ್ ಯಾವುದೇ ಪರಿಣಾಮವನ್ನು ಉಂಟು ಮಾಡಲಾರದು ಎಂದವರು ಹೇಳಿದ್ದಾರೆ.

ನೂತನ ಪ್ರಭೇದದ ಕೊರೋನ ವೈರಸ್‌ನ ಹರಡುವಿಕೆಯನ್ನು ತಡೆಯಲು ಭಾರತ ಹಾಗೂ ಇತರ 25 ದೇಶಗಳು ಬ್ರಿಟನ್‌ಗೆ ಆಗಮಿಸುವ ಹಾಗೂ ನಿರ್ಗಮಿಸುವ ವಿಮಾನಗಳಿಗೆ ಡಿಸೆಂಬರ್ 31ರವರೆಗೆ ನಿಷೇಧ ಹೇರಿವೆ.

ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ

ಇತರ ದೇಶಗಳಿಂದಲೂ ಆಗಮಿಸುವ ಪ್ರಯಾಣಿಕರಿಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಓಪಿ)ಗಳನ್ನು ಕೂಡಾ ಕೇಂದ್ರ ಸರಕಾರ ಪ್ರಕಟಿಸಿದೆ. ಆ ಪ್ರಕಾರ ವಿದೇಶದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆಯಲ್ಲಿ ಕೋವಿಡ್-19 ಪಾಸಿಟಿವ್ ಆದವರನ್ನು ಕೂಡಲೇ ಪ್ರತ್ಯೇಕವಾಗಿ ಇರಿಸಲಾಗುವುದು. ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದ ಇತರ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ವಿಮಾನದಲ್ಲಿ ಸೋಂಕಿತ ಪ್ರಯಾಣಿಕನ ಆಸನವಿರುವ ಮೂರು ಸಾಲುಗಳಲ್ಲಿ ಆಸೀನರಾಗಿರುವ ಇತರ ಪ್ರಯಾಣಿಕರನ್ನು ಸಂಪರ್ಕಕ್ಕೆ ಬಂದವರೆಂದು ಪರಿಗಣಿಸಲಾಗುವುದು.

ಎರಡು ಪ್ರತ್ಯೇಕ ವಿಮಾನಗಳಲ್ಲಿ ಲಂಡನ್‌ನಿಂದ ಸೋಮವಾರ ರಾತ್ರಿ ಭಾರತಕ್ಕೆ ಆಗಮಿಸಿದ 8 ಪ್ರಯಾಣಿಕರಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ. ಆದರೆ ಇಂದು ಬೆಳಗ್ಗೆ ದಿಲ್ಲಿಗೆ ಆಗಮಿಸಿದ ಬ್ರಿಟಿಶ್ ಏರ್‌ವೇಸ್‌ನ ವಿಮಾನದಲ್ಲಿದ್ದ ಯಾವುದೇ ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿಲ್ಲವೆಂದು ತಿಳಿದುಬಂದಿದೆ.

 ರೂಪಾಂತರಿತ ಕೊರೋನ ವೈರಸ್‌ಗೆ ಶೇ.70ರಷ್ಟು ಅಧಿಕ ಹರಡುವ ಸಾಮರ್ಥ್ಯ

 ರೂಪಾಂತರಗೊಂಡ ಕೊರೋನ ವೈರಸ್, ಕನಿಷ್ಠ ಪಕ್ಷ ಶೇ.70ರಷ್ಟು ಹೆಚ್ಚು ಸುಲಭವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆಯೆನ್ನಲಾಗಿದೆ. ರೂಪಾಂತರ ಗೊಂಡಿರುವ ಕೊರೋನ ವೈರಸ್‌ನಿಂದಾಗಿ ಕಳೆದ ಕೆಲವು ವಾರಗಳಲ್ಲಿ ಬ್ರಿಟನ್‌ನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಈ ರೂಪಾಂತರಿತ ವೈರಸ್‌ಗೆ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿರುವ ಕೋವಿಡ್-19 ಲಸಿಕೆಗಳು ಪರಿಣಾಮಕಾರಿಯಾಗಲಾರದು ಎಂಬ ಆತಂಕವೂ ವಿಜ್ಞಾನಿಗಳಲ್ಲಿ ಉಂಟಾಗಿದೆ.

  ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ರೂಪಾಂತರಿತ ಕೊರೋನ ವೈರಸ್ (ಬಿ.1.1.7) ಈಗಾಗಲೇ ಇತರ ದೇಶಗಳಿಗೂ ಪ್ರವೇಶಿಸಿದೆಯೆಂದು ಹೇಳಿದ್ದಾರೆ. ಇಟಲಿ, ಆಸ್ಟ್ರೇಲಿಯ, ಡೆನ್ಮಾರ್ಕ್ ಹಾಗೂ ನೆದರ್‌ಲ್ಯಾಂಡ್‌ನಲ್ಲಿ ಅದು ಕಾಣಿಸಿಕೊಂಡಿದೆಯೆಂದು ಅವರು ಹೇಳಿದ್ದಾರೆ. ದ.ಆಫ್ರಿಕದಲ್ಲಿ ಕೊರೋನ ವೈರಸ್‌ನ ಇನ್ನೊಂದು ಹೊಸ ಪ್ರಭೇದವು ಕಂಡುಬಂದಿದೆಯೆಂದು ಸೌಮ್ಯಾ ತಿಳಿಸಿದ್ದಾರೆ.ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕೋವಿಡ್-19 ಲಸಿಕೆಯು ರೂಪಾಂತರಗೊಂಡ ಕೊರೋನ ವೈರಸ್ ಮೇಲೆ ಪರಿಣಾಮಕಾರಿಯಾಗದೆ ಇರುವ ಸಾಧ್ಯತೆ ತೀರಾ ಕಡಿಮೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಈ ಮಧ್ಯೆ ಫೈಝರ್-ಬಯೋ ಎನ್‌ಟೆಕ್ ಸಿದ್ಧಪಡಿಸಿರುವ ಲಸಿಕೆಯು ನೂತನ ವೈರಸ್ ವಿರುದ್ಧ ರಕ್ಷಣೆಯನ್ನು ನೀಡುವ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಅತ್ಯಧಿಕವಾಗಿದೆ ಎಂದು ಬಯೋ ಎನ್‌ಟೆಕ್‌ನ ಸಹಸಂಸ್ಥಾಪಕ ಉಗುರ್ ಸಾಹಿನ್ ತಿಳಿಸಿದ್ದಾರೆ. ಹೇಳಿದ್ದಾರೆ. ಫೈಝರ್ ಲಸಿಕೆ ಈಗಾಗಲೇ ಅಮೆರಿಕ ಹಾಗೂ ಯುರೋಪ್ ಒಕ್ಕೂಟದ ರಾಷ್ಟ್ರಗಳಲ್ಲಿ ಬಿಡುಗಡೆಗೊಂಡಿದೆ. ಭಾರತದಲ್ಲಿಯೂ ತುರ್ತುಬಳಕೆಗೆ ಪರಿಶೀಲನೆಯಲ್ಲಿರುವ ಮೂರು ಕೋವಿಡ್-19 ಲಸಿಕೆಗಳ ಪೈಕಿ ಫೈಝರ್ ಲಸಿಕೆ ಕೂಡಾ ಒಂದಾಗಿದೆ.

ಬ್ರಿಟನ್‌ನಿಂದ ಏರ್ ಇಂಡಿಯಾ ವಿಮಾನದ ಮೂಲಕ ಆಹ್ಮದಾಬಾದ್ ವಿಮಾನದಲ್ಲಿ ಬಂದಿಳಿದ ನಾಲ್ವರು ಪ್ರಯಾಣಿಕರಲ್ಲೂ ಕೋವಿಡ್-19 ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News