×
Ad

ಉಡುಪಿ: 4 ತಾಲೂಕುಗಳ 66 ಗ್ರಾಪಂಗಳಿಗೆ ಶಾಂತಿಯುತ ಮತದಾನ

Update: 2020-12-22 22:13 IST

ಉಡುಪಿ, ಡಿ.22: ಜಿಲ್ಲೆಯ ಉಡುಪಿ, ಬ್ರಹ್ಮಾವರ, ಬೈಂದೂರು ಹಾಗೂ ಹೆಬ್ರಿ ತಾಲೂಕುಗಳ ಒಟ್ಟು 66 ಗ್ರಾಮಪಂಚಾಯತ್‌ಗಳ ಒಟ್ಟು 1066 ಸ್ಥಾನಗಳಿಗೆ ಇಂದು ಶಾಂತಿಯುತ ಮತದಾನ ನಡೆದಿದೆ. ಜಿಲ್ಲೆಯಲ್ಲಿ ಸರಾಸರಿ ಶೇ.74.10 ಮತದಾನವಾಗಿರುವ ಬಗ್ಗೆ ವರದಿಗಳು ಬಂದಿವೆ.

ನಾಲ್ಕು ತಾಲೂಕುಗಳಲ್ಲಿ ಒಟ್ಟು 67 ಗ್ರಾಪಂಗಳಿಗೆ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಘೋಷಿಸಿದ್ದರೂ, ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಪಂನಲ್ಲಿ ಗ್ರಾಮಸ್ಥರು ವಿವಿಧ ಕಾರಣಗಳಿಗಾಗಿ ಮತದಾನವನ್ನು ಬಹಿಷ್ಕರಿಸುವ ನಿರ್ಧಾರ ತಳೆದಿದ್ದು, ಇದರಿಂದ ಗ್ರಾಮದ ಯಾರೊಬ್ಬರೂ ಚುನಾವಣಾ ಕಣದಲ್ಲಿ ಉಳಿದಿರಲಿಲ್ಲ. ಹೀಗಾಗಿ ಕೋಡಿಯಲ್ಲಿ ಚುನಾವಣೆ ನಡೆಯಲಿಲ್ಲ.

ಪ್ರಾಥಮಿಕ ವರದಿಗಳ ಪ್ರಕಾರ ಮಂಗಳವಾರ ಉಡುಪಿ ತಾಲೂಕಿನ 16 ಗ್ರಾಪಂಗಳಲ್ಲಿ ಶೇ.74.80, ಬ್ರಹ್ಮಾವರ ತಾಲೂಕಿನ 26ಗ್ರಾಪಂಗಳಲ್ಲಿ ಶೇ.73.79, ಹೆಬ್ರಿ ತಾಲೂಕಿನ 9 ಗ್ರಾಪಂಗಳಲ್ಲಿ ಶೇ.79.41 ಹಾಗೂ ಬೈಂದೂರಿನ 15 ಗ್ರಾಪಂಗಳಲ್ಲಿ ಶೇ.71.28ರಷ್ಟು ಮತದಾನವಾಗಿದೆ.
ಕೋವಿಡ್ ಕಾರಣದಿಂದ ಜನರು ಮತದಾನದಿಂದ ದೂರ ಉಳಿಯುವರೆಂಬ ಭೀತಿ ಇದರಿಂದ ದೂರವಾಗಿದೆ. ಮತದಾನ ನಡೆದ ನಾಲ್ಕೂ ತಾಲೂಕುಗಳ ಹತ್ತಾರು ಮತಗಟ್ಟೆಗಳಿಗೆ ಭೇಟಿ ನೀಡಿದಾಗ ಜನರು ಮಾಸ್ಕ್‌ಗಳನ್ನು ಧರಿಸಿ ಮತದಾನ ಮಾಡಲು ಬಂದಿರುವುದು ಕಂಡು ಬಂತು. ಸುರಕ್ಷತಾ ಅಂತರದ ಬಗ್ಗೆ ಮತದಾರರು ಹೆಚ್ಚಿನ ಗಮನ ನೀಡಿದಂತೆ ಕಂಡುಬರಲಿಲ್ಲ. ಕೆಲವೊಮ್ಮೆ ಮತಗಟ್ಟೆಯ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳು ಜನರನ್ನು ದೂರ ದೂರ ಸರದಿ ಸಾಲಿನಲ್ಲಿ ನಿಲ್ಲುವಂತೆ ಗದರಿಸುವುದು ಕಂಡುಬಂತು.

ಬಿರುಸಿನ ಆರಂಭ: ನಾಲ್ಕೂ ತಾಲೂಕುಗಳಲ್ಲಿ ಮತದಾನಕ್ಕೆ ಬಿರುಸಿನ ಆರಂಭ ದೊರಕಿತ್ತು. ಮತದಾನ ಪ್ರಾರಂಭಗೊಂಡ ಮೊದಲ ಎರಡು ಗಂಟೆಗಳಲ್ಲಿ ಶೇ.15ರಷ್ಟು ಮತಗಳು ಚಲಾಯಿಸಲ್ಪಟ್ಟವು. ಅಪರಾಹ್ನ ಒಂದು ಗಂಟೆಗೆ ಶೇ.50ರಷ್ಟು ಮತಗಳು ಚಲಾವಣೆಗೊಂಡಿದ್ದವು.

ಹೆಬ್ರಿ ತಾಲೂಕಿನ ನಕ್ಸಲ್ ಬಾಧಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಎಂದಿನಂತೆ ಮತದಾನ ಜೋರಾಗಿತ್ತು. ನಾಡ್ಪಾಲು ಗ್ರಾಪಂನ ಸೋಮೇಶ್ವರ ಪೇಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 11:30ರ ಸುಮಾರಿಗೆ ಶೇ.50ರಷ್ಟು ಮತದಾನವಾಗಿದ್ದರೆ, 12:15ರ ಸುಮಾರಿಗೆ ಅದೇ ಗ್ರಾಪಂನ ಕಾಸರಮಕ್ಕಿ ಶಾಲೆಯ ಮತಗಟ್ಟೆಯಲ್ಲಿ ಶೇ.59ರಷ್ಟು ಮತದಾನವಾಗಿತ್ತು. ಮೂರು ಗಂಟೆಯ ವೇಳೆ ಜಿಲ್ಲೆಯಲ್ಲಿ ಶೇ.61ರಷ್ಟು ಮತದಾನ ವಾಗಿತ್ತು.

ಬೆಳಗಿನ ವೇಳೆ ಅಧಿಕ ಸಂಖ್ಯೆಯಲ್ಲಿ ಜನರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದ್ದರೆ, 12 ಗಂಟೆಯ ಸುಮಾರಿಗೆ ಬಿಸಿಲಿನ ಝಳ ಹೆಚ್ಚುತಿ ದ್ದಂತೆ ಮತಗಟ್ಟೆಗೆ ಬರುವವರ ಸಂಖ್ಯೆ ವಿರಳವಾಯಿತು. ಉಡುಪಿ ಪತ್ರಕರ್ತರ ತಂಡ ಬೈಂದೂರು ತಾಲೂಕಿನ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿದಾಗ ಅಲ್ಲಿ ಯಾರೊಬ್ಬರೂ ಮತದಾನಕ್ಕೆ ಇದ್ದಿರಲಿಲ್ಲ.

ಆದರೆ ಮೂರು ಗಂಟೆಯ ಬಳಿಕ ಮತ್ತೆ ಜನರು ಗುಂಪುಗುಂಪಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಇದು ಪಕ್ಷ ರಹಿತ ಚುನಾವಣೆ ಯಾಗಿದ್ದರೂ, ಒಂದು ಪಕ್ಷದ ಕಾರ್ಯಕರ್ತರು ವಾಹನಗಳಲ್ಲಿ ಜನರನ್ನು ಕರೆತರುವ ದೃಷ್ಯಗಳು ಅಲ್ಲಲ್ಲಿ ಕಂಡುಬಂದವು. ಅದರಲ್ಲೂ ಬೈಂದೂ ರಿನ ಕೆಲವು ಮತಗಟ್ಟೆಗಳಲ್ಲಿ ಅಟೋರಿಕ್ಷಾ ಸೇರಿದಂತೆ ವಿವಿಧ ವಾಹನಗಳಲ್ಲಿ ಜನರನ್ನು ಕರೆತರುತಿದ್ದರು.

ಮತಪಟ್ಟಿಯಲ್ಲಿ ಹೆಸರಿಲ್ಲ: ಕೆಲವು ಕಡೆ ಮತಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ ಕೆಲವರು ನಿರಾಶೆಯಿಂದ ಮರಳುವ ದೃಶ್ಯಗಳೂ ಕಂಡುಬಂದವು. ಕುಟುಂಬದ ಸದಸ್ಯರ ಹೆಸರುಗಳು ಬೇರೆ ಬೇರೆ ಮತಗಟ್ಟೆಗಳಲ್ಲಿ ಇರುವ ಬಗ್ಗೆ ಹಲವರು ಪತ್ರಕರ್ತರ ಬಳಿ ದೂರಿದರು. ಆತ್ರಾಡಿ, ಬೈಂದೂರಿನ ಯಳಜಿತ್ ಗ್ರಾಪಂನ ಗೋಳಿಹೊಳೆ ಮತಗಟ್ಟೆಯಲ್ಲಿ ಇವು ಕಂಡುಬಂದವು.

ನಿಷೇಧಾಜ್ಞೆಯನ್ನು ವಿಧಿಸಿದ್ದರೂ, ಮತಗಟ್ಟೆಗೆ 100ಮೀ. ಆಸುಪಾಸಿನಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಗುಂಪುಗುಂಪಾಗಿ ನಿಂತು ಮತದಾನಕ್ಕೆ ಬರುವವರಿಗೆ ಸೂಚನೆಗಳನ್ನು ನೀಡುತ್ತಿರುವುದು ಹಲವಾರು ಕಂಡುಬಂತು. ಆದರೆ ಜಿಲ್ಲೆಯ ಯಾವುದೇ ಮತಗಟ್ಟೆಯಿಂದ ಅಹಿತಕರ ಘಟನೆಯ ಯಾವುದೇ ವರದಿ ಬಂದಿಲ್ಲ.

ಮತಗಟ್ಟೆಗಳಿಗೆ ಡಿಸಿ, ಎಸ್ಪಿ ಭೇಟಿ

ಉಡುಪಿ ಜಿಲ್ಲೆಯ ನಾಲ್ಕು ತಾಲೂಕುಗಳ 66 ಗ್ರಾಪಂಗಳಿಗೆ ಇಂದು ಬೆಳಗ್ಗೆ 7 ರಿಂದ ಸಂಜೆಏ 5 ರವರೆಗೆ ಮತದಾನ ನಡೆದಿದ್ದು, ನಾಲ್ಕೂ ತಾಲೂಕುಗಳ ಹಲವಾರು ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲಿಸಿದರು.

ಬೆಳಗಿನಿಂದ ಉಡುಪಿ, ಹೆಬ್ರಿ, ಬೈಂದೂರು ಹಾಗೂ ಬ್ರಹ್ಮಾವರ ತಾಲೂಕುಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿನ ಮತಗಟ್ಟೆ ಅಧಿಕಾರಿ ಗಳೊಂದಿಗೆ ಚರ್ಚಿಸಿ ಮಾರ್ಗದರ್ಶನ ನೀಡಿದರು. ಕೆಲವಾರು ಕಡೆಗಳಲ್ಲಿ ಮತದಾರರೊಂದಿಗೆ ಮಾತನಾಡಿ ಅವರ ಅಭಿಪ್ರಾಯ ಪಡೆದರು.
ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲಾ ಕಡೆಗಳಲ್ಲಿ ಕಟ್ಟುನಿಚ್ಟಾಗಿ ಸೂಚನೆ ನೀಡಿದ ಜಿಲ್ಲಾಧಿಕಾರಿ, ಮಾಸ್ಕ್ ಧರಿಸದವರಿಗೆ ಎಚ್ಚರಿಕೆ ನೀಡಿದರು.

ಹಿರಿಯಡ್ಕ ಬಳಿ ಬೊಮ್ಮರಬೆಟ್ಟು ಗ್ರಾಪಂನ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತಗಟ್ಟೆಯಲ್ಲಿ ಪತ್ರಕರ್ತರನ್ನು ಭೇಟಿಯಾದ ಅವರು, ಜಿಲ್ಲೆಯಲ್ಲಿ ಎಲ್ಲಾ ನಾಲ್ಕು ತಾಲೂಕುಗಳ 66 ಗ್ರಾಪಂಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ, ಎಲ್ಲೂ ನೀತಿಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದರು. ಎಲ್ಲಿಂದಲೂ ಯಾವುದೇ ಸಮಸ್ಯೆ, ದೂರು ಕೇಳಿಬಂದಿಲ್ಲ ಎಂದರು.

ಕೋವಿಡ್‌ನಿಂದ ಮತದಾನಕ್ಕೆ ಹಿನ್ನಡೆಯಾಗಿದೆಯೇ ಎಂದು ಪ್ರಶ್ನಿಸಿದಾಗ, ಇದರಿಂದ ಯಾವುದೇ ಅಡ್ಡಿಯಾಗಿಲ್ಲ. ಎಲ್ಲಾ ಕಡೆ ಜನ ಕೋವಿಡ್ ಮಾರ್ಗಸೂಚಿಗಳನ್ನು ಅನುಕರಿಸಿ ಉತ್ಸಾಹದಿಂದ ಮತ ಚಲಾಯಿಸುತಿದ್ದಾರೆ ಎಂದರು. ಸ್ಥಳೀಯ ಗ್ರಾಪಂಗಳಿಗೆ ಮತದಾನ ನಡೆದಿರುವು ದರಿಂದ ಜನ ಹೆಚ್ಚು ಮುತುವರ್ಜಿಯಿಂದ ಮತದಾನ ಮಾಡುತಿದ್ದಾರೆ. ಇಲ್ಲಿ ಒಂದೊಂದು ಮತವೂ ಮಹತ್ವ ಹೊಂದಿರುವುದರಿಂದ ಅಭ್ಯರ್ಥಿ ಗಳು ಜನರು ಮತಗಟ್ಟೆಗೆ ಬರುವಂತೆ ನೋಡಿಕೊಳ್ಳುತಿದ್ದಾರೆ ಎಂದರು.

ವೀಕ್ಷಕರ ಭೇಟಿ: ಉಡುಪಿ ಜಿಲ್ಲಾ ಚುನಾವಣಾ ವೀಕ್ಷಕ ಮಂಗಳೂರು ಮೂಡಾದ ಆಯುಕ್ತ ದಿನೇಶ್ ಕುಮಾರ್ ಅವರು ಮತಗಟ್ಟೆ ಭೇಟಿ ವೇಳೆ ನಾಡ್ಪಾಲು ಗ್ರಾಪಂನ ಕಾಸರಮಕ್ಕಿ ಮತಗಟ್ಟೆಯಲ್ಲಿ ಪತ್ರಕರ್ತರಿಗೆ ಮಾತನಾಡಲು ಸಿಕ್ಕಿದ್ದು, ಎಲ್ಲಾ ಕಡೆ ವ್ಯವಸ್ಥಿತವಾಗಿ, ನೀತಿ ಸಂಹಿತೆ ಉಲ್ಲಂಘಿಸದೇ ಮತದಾನ ನಡೆಯುತ್ತಿದೆ ಎಂದರು.

ಮತದಾನಕ್ಕೆ ವಯಸ್ಸು ಅಡ್ಡಿಯಾಗಿಲ್ಲ....

ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತಗಟ್ಟೆಯಲ್ಲಿ ಹಿರಿಯಡ್ಕ ಪಡ್ಡಂ ನಿವಾಸಿ 88ರ ಹರೆಯದ ಕಾಳು ಶೆಟ್ಟಿ ಅವರು ತಮ್ಮ ಮಕ್ಕಳು-ಮೊಮ್ಮಕ್ಕಳ ಸಹಾಯದೊಂದಿಗೆ ಮತದಾನಕ್ಕೆ ಬಂದಿದ್ದರು. ಈವರೆಗೆ ಎಲ್ಲಾ ಚುನಾವಣೆಗಳಲ್ಲೂ ಮತದಾನ ಮಾಡಿರುವ ಅವರು ಈ ಬಾರಿಯೂ ಮಕ್ಕಳ ಸಹಾಯಹಸ್ತದಿಂದ ಮತ್ತೊಮ್ಮೆ ತವ್ಮು ಹಕ್ಕು ಚಲಾಯಿಸಲು ಬಂದಿದ್ದರು.

ಅದೇ ರೀತಿ ಪೆರ್ಡೂರು ಗ್ರಾಪಂನ ಪಾಡಿಗಾರು ಶಾಲಾ ಮತಗಟ್ಟೆಯಲ್ಲಿ ಹಿರಿಯರೊಬ್ಬರು ವೀಲ್‌ಚಯರ್ ಲ್ಲಿ ಕುಳಿತು ಮತ ಚಲಾಯಿಸಿದರು. ಸೋಮೇಶ್ವರ ಪೇಟೆ ಮತಗಟ್ಟೆಯಲ್ಲಿ ನಡೆಯಲು ತೊಂದರೆ ಇದ್ದ ಮಹಿಳೆಯೂ ವೀಲ್‌ಚೇರ್‌ನಲ್ಲಿ ತೆರಳಿ ತಮ್ಮ ಹಕ್ಕು ಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News