×
Ad

ಬ್ರಿಟನ್‌ನಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 8 ಮಂದಿಯ ಕೊರೋನ ವರದಿ ನೆಗೆಟಿವ್: ಡಿಎಚ್ಓ

Update: 2020-12-23 13:29 IST

ಉಡುಪಿ, ಡಿ. 23: ರೂಪಾಂತರಗೊಂಡ ಕೊರೋನ ವೈರಸ್ ಕಂಡು ಬಂದಿರುವ ಬ್ರಿಟನ್ ಹಾಗೂ ಇತರ ದೇಶಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಕೊರೋನ ಪರೀಕ್ಷೆಗೆ ಒಳಪಟ್ಟ ಎಂಟು ಮಂದಿಯ ವರದಿಯು ನೆಗೆಟಿವ್ ಬಂದಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.

ಇಲಾಖೆಯ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.21ರಂದು ಐವರು ಬ್ರಿಟನ್‌ನ ಲಂಡನ್, ಇಬ್ಬರು ಕೆನಾಡದ ಟೊರೆಂಟೊ, ಒಬ್ಬರು ಐರ್ಲೆಂಡ್‌ನ ಡಬ್ಲಿನ್‌ನಿಂದ ಆಗಮಿಸಿದ ಕುಂದಾಪುರದ ಒಬ್ಬರು, ಉಡುಪಿಯ ನಾಲ್ವರು, ಕಾರ್ಕಳ ತಾಲೂಕಿನ ಮೂವರ ಗಂಟಲು ದ್ರವವನ್ನು ಡಿ.22ರಂದು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಡಿ.23 ರಂದು ಈ ಎಲ್ಲ ಎಂಟು ಮಂದಿಯ ವರದಿಯು ನೆಗೆಟಿವ್ ಬಂದಿದೆ ಎಂದು ಹೇಳಿದರು.

ಈ ಎಂಟು ಮಂದಿ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿದ್ದು, 14 ದಿನದ ನಂತರ ಮತ್ತೆ ಇವರ ಗಂಟಲು ದ್ರವ ಪರೀಕ್ಷೆ ಮಾಡಲಾಗು ವುದು. ಈ ಮಧ್ಯೆ ಇವರಲ್ಲಿ ಯಾವುದೇ ರೋಗದ ಲಕ್ಷ್ಮಣಗಳು ಕಂಡು ಬಂದರೆ, ಕೂಡಲೇ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗುವುದು. ಇವರ ವರದಿಯು ಪಾಸಿಟಿವ್ ಬಾರದ ಕಾರಣ ಪ್ರಾಥಮಿಕ ಸಂಪರ್ಕ ಮಾಡಿದವರನ್ನು ಗುರುತಿಸುವ ಅಗತ್ಯ ಇರುವುದಿಲ್ಲ ಎಂದರು.

ಎಲ್ಲ ದೇಶದವರ ಬಗ್ಗೆ ನಿಗಾ

ಉಡುಪಿ ಜಿಲ್ಲೆಗೆ ವಿದೇಶದಿಂದ ಆಗಮಿಸುವ ಎಲ್ಲರ ಬಗ್ಗೆಯೂ ಹೆಚ್ಚು ನಿಗಾ ವಹಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಪ್ರವಾಸ ಮಾಡಿ ಬರುವವರನ್ನು ಕೂಡಲೇ ಪತ್ತೆ ಹಚ್ಚಿ, ಪರೀಕ್ಷೆಗೆ ಒಳಪಡಿಸಿ, 14 ದಿನಗಳ ಕಡ್ಡಾಯ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಇವರಲ್ಲಿ ಪಾಸಿಟಿವ್ ಕಂಡುಬಂದರೆ ಅವರನ್ನು ಆಸ್ಪತ್ರೆಗೆ ಅಥವಾ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಡಿ.21ಕ್ಕಿಂತ ಮೊದಲು ವಿದೇಶದಿಂದ ಜಿಲ್ಲೆಗೆ ಬಂದವರ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಡಿ.22ರಂದು ಬಂದಿರುವ ಮಾರ್ಗಸೂಚಿ ಪ್ರಕಾರ ಕೊರೋನ ಪರೀಕ್ಷೆ, 14 ಹೋಮ್ ಕ್ವಾರಂಟೈನ್ ಮತ್ತು ಆ ನಂತರ ಮತ್ತೊಮ್ಮೆ ಪರೀಕ್ಷೆ ಮಾಡಲಾಗುವುದು ಎಂದು ಅವರು ಹೇಳಿದರು.

ಈಗಾಗಲೇ ವಿಮಾನಯಾನ ಆರಂಭ ಸ್ಥಗಿತಗೊಂಡಿರುವುದರಿಂದ ಇನ್ನು ಸದ್ಯಕ್ಕೆ ಬ್ರಿಟನ್ ದೇಶದಿಂದ ಯಾರು ಬರುವವರಿಲ್ಲ ಎಂಬುದು ತಿಳಿದುಬಂದಿದೆ. ಈ ಸಂಬಂಧ ಸರಕಾರದಿಂದ ಹೊಸ ಮಾರ್ಗಸೂಚಿ ಬಂದರೆ ಅದನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುವುದು. ಈ ಹೊಸ ಕಾಯಿಲೆಯಲ್ಲೂ ಕೊರೋನದ ಲಕ್ಷಣಗಳೇ ಕಂಡುಬರುತ್ತದೆ. ಲಕ್ಷ್ಮಣ ಇರಬಹುದು ಮತ್ತು ಇಲ್ಲದೆ ಇರಬಹುದು. ಜಿಲ್ಲೆಗೆ ಆಗಮಿಸಿರುವ 8 ಮಂದಿಯ ಹಿಸ್ಟರಿ ಪರೀಶಿಲನೆ ಮಾಡಿ ದಾಗ ಇವರಲ್ಲಿ ಯಾರಿಗೂ ಯಾವುದೇ ಲಕ್ಷ್ಮಣಗಳು ಇಲ್ಲ ಎಂದು ಅವರು ಮಾಹಿತಿ ನೀಡಿದರು.

ಪಾಸಿಟಿವ್ ಬಂದರೆ ಜೀನ್ ಪರೀಕ್ಷೆ

ವಿದೇಶದಿಂದ ಆಗಮಿಸುವ ಎಲ್ಲರನ್ನು ಜಿಲ್ಲೆಯಲ್ಲಿ ಕೊರೋನ ಟೆಸ್ಟ್‌ಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಇವರಲ್ಲಿ ಸೋಂಕು ದೃಢಪಟ್ಟರೆ, ಅವರ ಮಾದರಿಯನ್ನು ಜೀನ್ ಪರೀಕ್ಷೆಗಾಗಿ ಬೆಂಗಳೂರಿನ ನ್ಯಾಷನಲ್ ಇಸ್ಟಿಟ್ಯೂಟ್ ಆಫ್ ವೈರೋಲಜಿ (ಎನ್‌ಐವಿ)ಗೆ ಕಳುಹಿಸಿಕೊಡಲಾಗುವುದು. ಇದರಿಂದ ಅವರಲ್ಲಿ ಯಾವ ಪ್ರಬೇಧದ ಕೊರೋನ ಇದೆ ಎಂಬುದು ದೃಢಪಡಿಸಬಹುದು ಎಂದು ಡಿಎಚ್‌ಓ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News