ಸರ್ಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿಯಿದ್ದಲ್ಲಿ ಲಿಖಿತ ಹೇಳಿಕೆ ನೀಡಲಿ : ಯು.ಟಿ. ಖಾದರ್
ಪುತ್ತೂರು : ದೇಶದಲ್ಲಿ ವಾಸಿಸುವ ಎಲ್ಲರೂ ನೆಮ್ಮದಿಯಿಂದ ಇದ್ದಲ್ಲಿ ಮಾತ್ರ ದೇಶ ನೆಮ್ಮದಿ ಕಾಣಲು ಸಾಧ್ಯ, ರೈತರು ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರೈತರ ಬಗ್ಗೆ ನೈಜ ಕಾಳಜಿ ಇದ್ದಲ್ಲಿ ಲಿಖಿತ ಹೇಳಿಕೆಯನ್ನು ನೀಡಲಿ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.
ಅವರು ಬುಧವಾರ ಇಲ್ಲಿಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದರು.
ಪ್ರಸ್ತುತ ರಾಜ್ಯ ಹಾಗೂ ಕೇಂದ್ರ ಸರಕಾರ ಗ್ರಾಮೀಣ ಬಡ ಜನರ ಸ್ವಾಭಿಮಾನ, ನೆಮ್ಮದಿಯ ಜೀವನಕ್ಕೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಎರಡು ವರ್ಷಗಳಲ್ಲಿ ಆಡಳಿತಕ್ಕೆ ಬಂದ ಡಬಲ್ ಇಂಜಿನ್ ಸ್ಟೀಡ್‍ನಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂದು ಹೇಳಿದ ರಾಜ್ಯ ಸರಕಾರದ ಇಂದಿನ ಕಾರ್ಯವೈಖರಿಯು ಪ್ರಶ್ನಾರ್ಹವಾಗಿದೆ. ಆಡಳಿತ ಪಕ್ಷದಿಂದಾಗಿ ಬಡ ಜನರಿಗೆ ರೇಷನ್ ಕಾರ್ಡ್ ಬೇಕಾದರೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲದ ಪರಿಸ್ಥಿತಿಯಿದೆ. ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳಲು ಸರ್ವರ್ ಬಂದ್ ಮಾಡಿ ಬಿಟ್ಟಿದ್ದಾರೆ. ಕಳೆದ ಕಾಂಗ್ರೆಸ್ ಸರಕಾರದಿಂದ ಮನೆ ಕಟ್ಟಲು ಬಿಡುಗಡೆ ಮಾಡಿದ ಅನುದಾನಗಳು ಫಲಾನುಭವಿಗಳಿಗೆ ನೀಡುತ್ತಿಲ್ಲ. ಬಿಪಿಎಲ್ ಅಕ್ಕಿಯನ್ನು ಏಳು ಕೆ.ಜಿಯಿಂದ 5 ಕೆಜಿಗೆ ಇಳಿಸಿದೆ. ಪೆಟ್ರೋಲ್, ಚಿನ್ನದ ದರ ಏರಿಕೆ ಮಾಡಿದ್ದು, ಗ್ಯಾಸ್ ಸಬ್ಸಿಡಿಯನ್ನು ರದ್ದು ಮಾಡಿದೆ. ಇದನ್ನು ಪ್ರಶ್ನಿಸಿದರೆ ದೇಶಕ್ಕಾಗಿ ಎಂಬ ಸಮಜಾಯಿಸಿ ನೀಡುತ್ತಿದ್ದಾರೆ. ಜನಸಾಮಾನ್ಯರ ನೋವು ಸರ್ಕಾರಕ್ಕೆ ಅರ್ಥವಾಗುವುದಿಲ್ಲ.
ಮಕ್ಕಳ ಶಿಕ್ಷಣ ಸಂಬಂಧ ಯಾವುದೇ ರೂಪುರೇಷೆಗಳನ್ನು ನೀಡದೇ ಸರ್ಕಾರ ಗೊಂದಲ ಉಂಟು ಮಾಡಿದೆ. ಶಿಕ್ಷಣ ವಿಚಾರದಲ್ಲಿ ಹೆತ್ತವರು ಚಿಂತಿತರಾಗಿದ್ದು, ಶಿಕ್ಷಕರ ಜೀವನ ಚಿಂತಾಜನ ಸ್ಥಿತಿಯಲ್ಲಿದೆ. ಇನ್ನೊಂದೆಡೆ ರೈತರು, ಕೆಎಸ್‍ಆರ್‍ಟಿಸಿ ನೌಕರರು ರಾತ್ರಿ ಹಗಲು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಸರ್ಕಾರವು ಬಡವರಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ರದ್ದು ಮಾಡಿ, ಉಳ್ಳವರಿಗೆಗೋಸ್ಕರ ಮಾತ್ರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮತ್ತೊಂದೆಡೆ ಮರಾಠ ನಿಗಮ ಸ್ಥಾಪಿಸುವ ಮೂಲಕ ಕನ್ನಡಿಗೆ ಅನ್ಯಾಯ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ದೇಶದ ಬೆನ್ನೆಲುಬಾಗಿರುವ ರೈತನ ಕುರಿತು ಸಂಸದೆ ಶೋಭಾ ಕರಂದ್ಲಾಜೆ ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ರೈತರಿಂದ ರಾಷ್ಟ್ರೀಯತೆಗೆ ಧಕ್ಕೆ ಆಗುತ್ತಿದೆ ಎಂಬ ಹೇಳಿಕೆ ನೀಡುತ್ತಿರುವ ಶೋಭಾ ಕರಂದ್ಲಾಜೆ ಅವರು ಇದಕ್ಕೆ ಪೂರಕ ದಾಖಲೆಯನ್ನು ನೀಡಬೇಕು. ಇಲ್ಲದಿದ್ದಲ್ಲಿ ರೈತರ ಕ್ಷಮೆ ಯಾಚಿಸಬೇಕು. ರೈತರ ಬೇಡಿಕೆಗಳ ಮನವಿಯನ್ನು ಅವರು ಜನರ ಮುಂದೆ ಬಹಿರಂಗ ಗೊಳಿಸಲಿ ಎಂದು ಒತ್ತಾಯಿಸಿದರು.
ಬಜೆಪಿಯ ಜನವಿರೋಧಿ ನೀತಿಯಿಂದಾಗಿ ಜನಸಾಮಾನ್ಯರು ನೋವಿನಲ್ಲಿದ್ದಾರೆ. ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ತಕ್ಕ ಉತ್ತರ ನೀಡಲಿದೆ. ಕಾಂಗ್ರೆಸ್ ಬೆಂಬಲಿತರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿ ಸಹೋದರತೆಯ ಮತ್ತು ಅಭಿವೃದ್ಧಿಯ ಗ್ರಾಮವನ್ನಾಗಿ ಪರಿವರ್ತಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಪಕ್ಷದ ಚುನಾವಣಾ ಉಸ್ತುವಾರಿ ಗಿರೀಶ್ ಶೆಟ್ಟಿ, ಶುಕೂರ್ ಹಾಜಿ ಉಪಸ್ಥಿತರಿದ್ದರು.