ಸಿಸ್ಟರ್ ಅಭಯಾರನ್ನು ಕೊಂದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಳ್ಳ!

Update: 2020-12-23 12:42 GMT

ತಿರುವನಂತಪುರಂ,ಡಿ.23: ಕೇರಳದ ಕೊಟ್ಟಾಯಂನ ಕಾನ್ವೆಂಟ್‍ನಲ್ಲಿ 28 ವರ್ಷಗಳ ಹಿಂದೆ ನಡೆದ ಭಗಿನ ಅಭಯಾ ಕೊಲೆ ಪ್ರಕರಣದ ಇಬ್ಬರು ಅಪರಾಧಿಗಳಾದ ಫಾದರ್ ಥಾಮಸ್ ಕೊಟೂರ್ ಹಾಗೂ ಭಗಿನಿ (ನನ್) ಸೆಫಿ ಅವರಿಗೆ ಶಿಕ್ಷೆಯಾಗುವಲ್ಲಿ ಒಬ್ಬ ಮಾಜಿ ಕಳ್ಳನಾಗಿರುವ ಅಡಕ್ಕ ರಾಜು ಸಹಿತ ಇನ್ನು ಕೆಲವು ಸಾಕ್ಷಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ತಾವು ನೀಡಿದ್ದ ಹೇಳಿಕೆಗೆ ಕೊನೆಯವರೆಗೂ  ಅಂಟಿಕೊಂಡಿದ್ದೇ ಪ್ರಮುಖ ಕಾರಣ.

ಈ ಪ್ರಕರಣದಲ್ಲಿ ಭಗಿನಿ ಅಭಯಾಳ ಇಬ್ಬರು ರೂಂಮೇಟ್ ಗಳು, ಅದೇ ಕಾನ್ವೆಂಟ್‍ನಲ್ಲಿದ್ದ ಇಬ್ಬರು ಭಗಿನಿಯರು, ಒಬ್ಬ ಸುಪೀರಿಯರ್, ಇಬ್ಬರು ಅಡುಗೆಯಾಳುಗಳು ಹಾಗೂ ಒಬ್ಬ ನೆರೆಮನೆಯವರು ಸಾಕ್ಷಿಗಳಾಗಿದ್ದರೂ ಈ ಎಂಟು ಮಂದಿ ಹಲವು ಒತ್ತಡಕ್ಕೆ ಮಣಿದು ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದರೂ ರಾಜು ಸಹಿತ ಅಭಯಾ ಕಲಿತಿದ್ದ ಕೊಟ್ಟಾಯಂನ ಬಿಸಿಎಂ ಮಹಿಳಾ ಕಾಲೇಜಿನ ಮಾಜಿ ಪ್ರೊಫೆಸರ್ ತ್ರೆಸಿಯಮ್ಮ, ಅಲಪುಝ ಮೆಡಿಕಲ್ ಕಾಲೇಜಿನ ಗೈನಕಾಲಜಿ ವಿಭಾಗದ ಮುಖ್ಯಸ್ಥ ಡಾ. ಲಲಿತಾಂಬಿಕ, ಅದೇ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ ಪಿ ರೆಮಾ ತಮ್ಮ ಹೇಳಿಕೆಗಳಿಗೆ ಅಂಟಿಕೊಂಡು  ತಪ್ಪಿತಸ್ಥರಾದ ಫಾದರ್ ಥಾಮಸ್ ಕೊಟ್ಟೂರ್ ಹಾಗೂ ಭಗಿನಿ ಸೆಫಿಗೆ  ಶಿಕ್ಷೆಯಾಗುವಂತೆ ನೋಡಿಕೊಂಡಿದ್ದಾರೆ

ಈ ಪ್ರಕರಣದಲ್ಲಿ ಮಾಜಿ ಕಳ್ಳ ಅಡಕ್ಕ ರಾಜು ಪ್ರಮುಖ ಸಾಕ್ಷಿಯಾಗಿದ್ದಾನೆ. ಅಡಿಕೆ ಮತ್ತಿತರ ಸಣ್ಣಪುಟ್ಟ ಕಳ್ಳತನ ನಡೆಸುತ್ತಿದ್ದ ಈತ 1993ರಲ್ಲಿ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐಗೆ ನೀಡಿದ್ದ ಹೇಳಿಕೆಯಲ್ಲಿ ಘಟನೆ ನಡೆದ  ದಿನ ನಸುಕಿನ ಜಾವ ಫಾದರ್ ಥಾಮಸ್ ಎಂ ಕೊಟ್ಟೂರ್ ಹಾಗೂ ಜೋಸ್ ಪೂತ್ರಿಕ್ಕಯಿಲ್ ಅವರು ಕಾನ್ವೆಂಟ್‍ನ ಹಿಂದಿನ ಭಾಗದ ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ನೋಡಿದ್ದಾಗಿ ತಿಳಿಸಿದ್ದಾನೆ. ಅದೇ ದಿನ ಮುಂಜಾನೆ ರಾಜು ಕಾನ್ವೆಂಟ್ ಕಂಪೌಂಡ್‍ನೊಳಕ್ಕೆ ಹಾರಿ ಏನನ್ನೋ ಕದಿಯಲು ಯತ್ನಿಸುತ್ತಿರುವಾಗ ಪಾದ್ರಿಗಳನ್ನು ನೋಡಿದ್ದ.

ಈ ಹಿಂದೆ ಈ ಪ್ರಕರಣದ ತನಿಖೆ ನಡೆಸಿದ್ದ ಕ್ರೈಂ ಬ್ರ್ಯಾಂಚ್ ಇದನ್ನೊಂದು ಆತ್ಮಹತ್ಯೆ ಪ್ರಕರಣ ಎಂದು ಬಿಂಬಿಸಿತ್ತು.  ಆಗಸ್ಟ್ 2019ರಲ್ಲಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಆರಂಭವಾದಾಗ “ನಾನು ಮಾಡದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಕ್ರೈಂ ಬ್ರ್ಯಾಂಚ್ ಒತ್ತಡ ಹಾಕಿತ್ತು.” ಎಂದು ರಾಜು ನ್ಯಾಯಾಲಯಕ್ಕೆ ಹೇಳಿದ್ದ. ಕೊಲೆಯನ್ನು ಒಪ್ಪಿಕೊಂಡರೆ ಆತನ ಕುಟುಂಬಕ್ಕೆ ರೂ 2 ಲಕ್ಷ ನೀಡುವುದಾಗಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಹೇಳಿದ್ದರೆಂದು ಆತ ವಿಚಾರಣೆ ವೇಳೆ ತಿಳಿಸಿದ್ದ.

ಬುಧವಾರ ಈ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಘೋಷಣೆಯಾಗಿದೆ ಎಂದು ತಿಳಿಯುತ್ತಲೇ “ನನ್ನ ಮಗುವಿಗೆ ನ್ಯಾಯ ದೊರಕಿತು ಎಂದು ಖುಷಿಯಾಗಿದ್ದೇನೆ ಈ ಖುಷಿಯಲ್ಲಿಯೇ ಮದ್ಯ ಸೇವಿಸುತ್ತೇನೆ” ಎಂದು ರಾಜು ಹೇಳಿದ್ದಾನೆ.

ಭಗಿನಿ ಅಭಯಾರ ಶಿಕ್ಷಕಿಯಾಗಿದ್ದ ತ್ರೆಸಿಯಮ್ಮ ತಮ್ಮ ಸಾಕ್ಷ್ಯದಲ್ಲಿ ಫಾ. ಥಾಮಸ್ ಕೊಟ್ಟೂರ್ ಹಾಗೂ ಈ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಫಾ. ಜೋಸ್ ಪೂತ್ರಿಕ್ಕಯಿಲ್ ಇಬ್ಬರೂ ತಮ್ಮ ವರ್ತನೆಯಿಂದ ವಿದ್ಯಾರ್ಥಿನಿಯರಿಗೆ ಮುಜುಗರ ಸೃಷ್ಟಿಸುತ್ತಿದ್ದರು ಹಾಗೂ ಫಾ ಕೊಟ್ಟೂರ್ ಅವರು ಉದ್ದೇಶಪುರ್ವಕವಾಗಿ ವಿದ್ಯಾರ್ಥಿನಿಯರ ಕಾಲುಗಳನ್ನೇ ದಿಟ್ಟಿಸುತ್ತಿದ್ದರು ಎಂದು ನ್ಯಾಯಾಲಯಕ್ಕೆ ಹೇಳಿದ್ದರು. ಅಷ್ಟೇ ಅಲ್ಲದೆ ಭಗಿನಿ ಅಭಯಾರ ಮೃತದೇಹ ನೋಡಿದಾಗ ಆಕೆಯ  ತುಟಿಯ ಮೇಲ್ಭಾಗ ಹಾಗೂ ಮೂಗಿನ ಸಮೀಪ ಗಾಯದ ಕಲೆ ಇದ್ದುದನ್ನು ಗಮನಿಸಿದ್ದಾಗಿ  ಹೇಳಿದ್ದರು.

“ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯದಂತೆ ನನಗೆ ಬೆದರಿಕೆಗಳು ಬಂದಿದ್ದವು ಆದರೆ ನಾನು ಭಯ ಪಡದೆ ಸತ್ಯವನ್ನೇ ಹೇಳಿದ್ದೇನೆ,'' ಎಂದು ಅವರು ಕಳೆದ ವರ್ಷವೇ ಹೇಳಿದ್ದರು.

ಅಲಪುಝಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ ಲಲಿತಾಂಬಿಕಾ ಹಾಗೂ ಡಾ ರೇಮಾ ಅವರ ಸಾಕ್ಷ್ಯ ಕೂಡ ಮಹತ್ವದ್ದಾಗಿತ್ತು. ಭಗಿನಿ ಸೆಫಿ ಅವರು ಹೈಮೆನೊಪ್ಲಾಸ್ಟಿ ಎಂಬ ಶಸ್ತ್ರಕ್ರಿಯೆಗೊಳಗಾಗಿದ್ದರು  ಹಾಗೂ ಭಗಿನಿಯಾಗಿರುವ ಆಕೆ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿದ್ದು ತಿಳಿಯದಂತಾಗಲು ಅವರು ಈ ಶಸ್ತ್ರಕ್ರಿಯೆಗೊಳಗಾಗಿದ್ದರು ಎಂದು ಈ ವೈದ್ಯೆಯರು ತಮ್ಮ ಹೇಳಿಕೆಯಲ್ಲಿ  ನ್ಯಾಯಾಲಯಕ್ಕೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News