ಶೆಹ್ಲಾ ರಶೀದ್ ಕುರಿತು ಮಾನಹಾನಿಕರ ವರದಿ ಪ್ರಕಟಿಸದಂತೆ ತಂದೆ ಮತ್ತು ಮಾಧ್ಯಮಗಳಿಗೆ ನ್ಯಾಯಾಲಯದ ಆದೇಶ

Update: 2020-12-23 13:50 GMT

ಶ್ರೀನಗರ,ಡಿ.23: ಸಾಮಾಜಿಕ ಹೋರಾಟಗಾರ್ತಿ ಶೆಹ್ಲಾ ರಶೀದ್ ಅವರ ಖಾಸಗಿ ಬದುಕಿನ ಬಗ್ಗೆ ಮಾನಹಾನಿಕರ ವಿಷಯಗಳನ್ನು ಮತ್ತು ಘನತೆ ಹಾಗೂ ಗೌರವದಿಂದ ಬದುಕುವ ಅವರ ಹಕ್ಕನ್ನು ಅತಿಕ್ರಮಿಸುವ ಯಾವುದನ್ನೂ ಪ್ರಕಟಿಸದಂತೆ ಮತ್ತು ಪ್ರಸಾರಿಸದಂತೆ ಇಲ್ಲಿಯ ನ್ಯಾಯಾಲಯವು ಬುಧವಾರ ಆಕೆಯ ತಂದೆ ಅಬ್ದುಲ್ ರಶೀದ್ ಶೋರಾ ಮತ್ತು ಮಾಧ್ಯಮಗಳಿಗೆ ತಾಕೀತು ಮಾಡಿದೆ.

 ತಮ್ಮನ್ನು ರಾಷ್ಟ್ರವಿರೋಧಿಗಳು ಎಂದು ಬಣ್ಣಿಸುವುದು ಸೇರಿದಂತೆ ತಮ್ಮ ವಿರುದ್ಧ ಸುಳ್ಳು ಮತ್ತು ಕ್ಷುಲ್ಲಕ ಆರೋಪಗಳನ್ನು ಹೊರಿಸುವ ಮೂಲಕ ತಮ್ಮನ್ನು ಅವಮಾನಿಸುವ ಮತ್ತು ತಮ್ಮ ಗೌರವಕ್ಕೆ ಕುಂದನ್ನುಂಟು ಮಾಡಲು ಪ್ರತಿಯೊಂದೂ ಅವಕಾಶವನ್ನು ಶೋರಾ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಶೆಹ್ಲಾ,ಅವರ ತಾಯಿ ಝುಬೇದಾ ಅಖ್ತರ್ ಮತ್ತು ಸೋದರಿ ಆಸ್ಮಾ ರಶೀದ್ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾ.ಫಯಾಝ್ ಅಹ್ಮದ್ ಕುರೇಷಿ ಅವರು ಈ ಆದೇಶವನ್ನು ಹೊರಡಿಸಿದರು. ಅರ್ಜಿಯಲ್ಲಿ ಹೆಸರಿಸಿರುವ ಪ್ರತಿವಾದಿಗಳಲ್ಲಿ ಶೋರಾ ಜೊತೆ ಕೆಲವು ಮಾಧ್ಯಮಗಳು,ಫೇಸ್‌ಬುಕ್,ಟ್ವಿಟರ್,ಯು ಟ್ಯೂಬ್ ಮತ್ತು ಗೂಗಲ್ ಸೇರಿವೆ.

ಶೆಹ್ಲಾ,ಅವರ ತಾಯಿ ಮತ್ತು ಸೋದರಿಯ ವಿರುದ್ಧ ಪ್ರಕಟಿಸಲಾದ ವರದಿಗಳು ಅವರ ಖಾಸಗಿತನದ ಮತ್ತು ಘನತೆಯಿಂದ ಬದುಕುವ ಹಕ್ಕುಗಳನ್ನು ಉಲ್ಲಂಘಿಸಿವೆ ಎನ್ನುವುದು ತನ್ನ ಮೇಲ್ನೋಟದ ಅಭಿಪ್ರಾಯವಾಗಿದೆ ಎಂದು ಹೇಳಿದ ನ್ಯಾ.ಕುರೇಷಿ, ಶೆಹ್ಲಾರ ಬದುಕಿನಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದರಿಂದ ಮತ್ತು ಅವರಿಗೆ ಕಿರುಕುಳ ಹಾಗೂ ನೋವನ್ನುಂಟು ಮಾಡುವ ಯಾವುದೇ ವಿಷಯವನ್ನು ಪ್ರಕಟಿಸುವುದರಿಂದ ದೂರವಿರುವಂತೆ ಶೋರಾ ಮತ್ತು ಇತರ ಪ್ರತಿವಾದಿಗಳಿಗೆ ಆದೇಶಿಸಿದರು.

ಶೆಹ್ಲಾರ ಹೆತ್ತವರ ನಡುವಿನ ಖಾಸಗಿ ವೈವಾಹಿಕ ವಿವಾದಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಕಟಿಸದಂತೆಯೂ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಿಗೆ ಆದೇಶಿಸಿದ ನ್ಯಾಯಾಲಯವು,ಇಂತಹ ವಿಷಯಗಳ ಆನ್‌ಲೈನ್ ಲಿಂಕ್‌ಗಳನ್ನು ನಿಷ್ಕ್ರಿಯಗೊಳಿಸುವಂತೆಯೂ ತಾಕೀತು ಮಾಡಿತು.

ವಿವಾದವು ವಿಚಾರಣಾಧೀನವಾಗಿರುವಾಗ ಕುಟುಂಬದ ಖಾಸಗಿ ವಿಷಯವನ್ನು ಪ್ರಮುಖವಾಗಿ ಬಿಂಬಿಸಲು ಮಾಧ್ಯಮಗಳಿಗೆ ಕಾನೂನು ಬೆಂಬಲವಿಲ್ಲ. ಹಾಗೆ ಮಾಡುವುದರಿಂದ ಅವು ಸಾಮಾಜಿಕ ತಪ್ಪನ್ನೆಸಗುತ್ತಿವೆ ಮತ್ತು ಅದು ಅರ್ಜಿದಾರರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯವು ಹೇಳಿತು.

ಶೆಹ್ಲಾ,ಅವರ ತಾಯಿ ಮತ್ತು ಸೋದರಿಗೆ ಕಿರುಕುಳ ನೀಡುವುದರಿಂದ ದೂರವಿರುವಂತೆ ಕೌಟುಂಬಿಕ ಹಿಂಸೆ ಕಾಯ್ದೆಯಡಿ ಕೆಳ ನ್ಯಾಯಾಲಯವು ಹೊರಡಿಸಿದ್ದ ಆದೇಶವನ್ನು ಶೋರಾ ಉಲ್ಲಂಘಿಸಿದ್ದಾರೆ ಎಂದೂ ನ್ಯಾಯಾಲಯವು ಬೆಟ್ಟು ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News