×
Ad

ಜಮ್ಮು-ಕಾಶ್ಮೀರ ಡಿಡಿಸಿ ಚುನಾವಣೆ :278 ಸ್ಥಾನಗಳಲ್ಲಿ ಕೇವಲ 26 ಸ್ಥಾನಗಳಿಸಿದ ಕಾಂಗ್ರೆಸ್

Update: 2020-12-23 19:47 IST

ಹೊಸದಿಲ್ಲಿ,ಡಿ.23: ಜಮ್ಮು-ಕಾಶ್ಮೀರದಲ್ಲಿ ನಡೆದ ಮೊಟ್ಟಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕಳಪೆ ಸಾಧನೆಯನ್ನು ಪ್ರದರ್ಶಿಸಿದೆ. ಫಲಿತಾಂಶ ಪ್ರಕಟಗೊಂಡಿರುವ 278 ಸ್ಥಾನಗಳ ಪೈಕಿ ಕೇವಲ 26 ಸ್ಥಾನಗಳನ್ನು ಗೆದ್ದಿರುವ ಅದು ಬಿಜೆಪಿ,ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳಿಗಿಂತ ಹಿಂದುಳಿದಿದೆ. ತಾನು ಗುಪ್ಕರ್ ಮೈತ್ರಿಕೂಟವನ್ನು ಬೆಂಬಲಿಸುವ ಸುಳಿವನ್ನು ಕಾಂಗ್ರೆಸ್ ನೀಡಿದೆ. ಫಾರೂಕ್ ಅಬ್ದುಲ್ಲಾ ನೇತೃತ್ವದ ಏಳು ಪಕ್ಷಗಳ ಗುಪ್ಕರ್ ಮೈತ್ರಿಕೂಟ ಅಥವಾ ಗುಪ್ಕರ್ ಘೋಷಣೆಗಾಗಿ ಜನತಾ ಮೈತ್ರಿಕೂಟ (ಪಿಎಜಿಡಿ)ವು 278 ಸ್ಥಾನಗಳ ಪೈಕಿ 110 ಸ್ಥಾನಗಳನ್ನು ಗೆದ್ದುಕೊಂಡಿದೆ.

ಕಾಶ್ಮೀರ ಕಣಿವೆಯಲ್ಲಿ ಮೂರು ಸ್ಥಾನಗಳು ಸೇರಿದಂತೆ 75 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯು ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದೆ. ಗುಪ್ಕರ್ ಮೈತ್ರಿಕೂಟದ ಪಾಲುದಾರರ ಪೈಕಿ ಎನ್‌ಸಿ 67,ಪಿಡಿಪಿ 27,ಪೀಪಲ್ಸ್ ಕಾನ್ಫರೆನ್ಸ್ 8,ಜಮ್ಮು-ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ 3 ಮತ್ತು ಸಿಪಿಎಂ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಚುನಾವಣೆಗೆ ತಾವು ಸಿದ್ಧರಾಗಿರಲಿಲ್ಲ ಎಂದು ಕಾಂಗ್ರೆಸ್ ನಾಯಕರು ಸಮಜಾಯಿಷಿ ನೀಡಿದರೆ,370ನೇ ವಿಧಿಯ ರದ್ದತಿಯಂತಹ ತುರ್ತು ವಿಷಯಗಳ ಕುರಿತು ಕಾಂಗ್ರೆಸ್ ಪಕ್ಷದ ಅಸ್ಪಷ್ಟ ನಿಲುವು ಕೂಡ ಅದರ ಪತನಕ್ಕೆ ಕಾರಣವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಕೆಲವು ಘಟಾನುಘಟಿಗಳು ಸೋಲನ್ನು ಅನುಭವಿಸಿದ್ದಾರೆ. ಜಮ್ಮು-ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ಗುಲಾಂ ಅಹ್ಮದ್ ಮಿರ್ ಅವರ ಪುತ್ರ ನಸೀರ್ ಅಹ್ಮದ್ ಮಿರ್ ಅವರು ಅನಂತನಾಗ್ ಜಿಲ್ಲೆಯ ವೆರಿನಾಗ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಪೀರ್ ಶಾಬಾಝ್ ಅಹ್ಮದ್ ಅವರಿಂದ ಪರಾಭವಗೊಂಡಿದ್ದಾರೆ.

‘ಚುನಾವಣೆಗೆ ಪಕ್ಷವು ಸನ್ನದ್ಧವಾಗಿರಲಿಲ್ಲ. ಗುಪ್ಕರ್ ಮೈತ್ರಿಕೂಟದ ಜೊತೆಗೆ ಸ್ಥಾನ ಹೊಂದಾಣಿಕೆ ಮಾತುಕತೆ ತುಂಬ ಸಮಯವನ್ನು ತೆಗೆದುಕೊಂಡಿತ್ತು. ನಾವು ತುಂಬ ಸಮಯವನ್ನು ವ್ಯರ್ಥ ಮಾಡಿದೆವು ಮತ್ತು ಚುನಾವಣಾ ಸಿದ್ಧತೆಗೆ ನಮ್ಮ ಬಳಿ ಹೆಚ್ಚಿನ ಸಮಯವಿರಲಿಲ್ಲ’ಎಂದು ಜಮ್ಮು-ಕಾಶ್ಮೀರ ಕಾಂಗ್ರೆಸ್‌ನ ಉಪಾಧ್ಯಕ್ಷ ಗುಲಾಂ ನಬಿ ಮೋಂಗಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಕಾಂಗ್ರೆಸ್ ಗುಪ್ಕರ್ ಮೈತ್ರಿಕೂಟದ ಭಾಗವಾಗಿರುವುದಿಲ್ಲ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ ಸುರ್ಜೆವಾಲಾ ಅವರು ನವಂಬರ್‌ನಲ್ಲಿ ಘೋಷಿಸುವವರೆಗೆ ತಾನು ಮೈತಿಕೂಟವನ್ನು ಸೇರಬೇಕೇ ಎಂಬ ಬಗ್ಗೆ ಕಾಂಗ್ರೆಸ್‌ಗೆ ತುಂಬ ಸಮಯ ಸ್ಪಷ್ಟತೆಯಿರ ಲಿಲ್ಲ. ಸುರ್ಜೆವಾಲಾ ಪ್ರಕಟಣೆಯ ಬಳಿಕ ಎನ್‌ಸಿ ಕಾಂಗ್ರೆಸ್‌ನೊಂದಿಗೆ ಸ್ಥಾನ ಹೊಂದಾಣಿಕೆಯ ಎಲ್ಲ ಮಾತುಕತೆಗಳನ್ನು ರದ್ದುಗೊಳಿಸಿತ್ತು. ಆದರೆ ನಂತರ ಮೊದಲ ಎರಡು ಹಂತಗಳ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಮೈತ್ರಿಕೂಟ ಏನೋ ಒಡಂಬಡಿಕೆ ಮಾಡಿಕೊಂಡಿರುವಂತೆ ಕಂಡು ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News