ಬಾಲಕಿಯೊಂದಿಗೆ ಫಿಝ್ಝಾ ತಿನ್ನಲು ಕುಳಿತಿದ್ದ ಮುಸ್ಲಿಂ ಯುವಕ ‘ಮತಾಂತರ ವಿರೋಧಿ ಕಾಯ್ದೆ’ಯಡಿ ಜೈಲುಪಾಲು!

Update: 2020-12-23 15:03 GMT

ಬಿಜನೌರ್,ಡಿ.23: ತನ್ನ ಮಾಜಿ ಸಹಪಾಠಿ, ದಲಿತ ಸಮುದಾಯಕ್ಕೆ ಸೇರಿದ್ದ 16ರ ಹರೆಯದ ಬಾಲಕಿಯೊಂದಿಗೆ ಫಿಝಾ ತಿನ್ನಲು ಕುಳಿತಿದ್ದ 18 ವರ್ಷದ ಮುಸ್ಲಿಮ್ ಯುವಕನೋರ್ವ ನೂತನ ‘ಮತಾಂತರ ವಿರೋಧಿ ಕಾಯ್ದೆ’ಯಡಿ ಜೈಪಾಲಾದ ಘಟನೆಯು ಉತ್ತರಪ್ರದೇಶದ ಬಿಜನೌರ್ ನಲ್ಲಿ ನಡೆದಿದೆ.

ಜೈಲು ಪಾಲಾದ ಯುವಕನನ್ನು ಸೋನು (18) ಎಂದು ಗುರುತಿಸಲಾಗಿದೆ. ಉತ್ತರಪ್ರದೇಶದಲ್ಲಿ ಮತಾಂತರ ವಿರೋಧಿ ಕಾಯ್ದೆಯು ಜಾರಿಗೆ ಬಂದ ಬಳಿಕ ಹಲವಾರು ಯುವಕರು ಜೈಲು ಪಾಲಾಗಿದ್ದಾರೆ.

ಸೋನು ವಿರುದ್ಧ ‘ಪರಾರಿಯಾಗಲು ಪುಸಲಾಯಿಸಿದ ಪ್ರಕರಣ ಹಾಗೂ ಮತಾಂತರಗೊಂಡು ಮದುವೆಯಾಗಲು ಪ್ರೇರೇಪಿಸಿದ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಉತ್ತರ ಪ್ರದೇಶದ ಬೆರ್ಖೇಡ ಎಂಬಲ್ಲಿ ರೈತನಾಗಿರುವ ಬಾಳಕಿಯ ತಂದೆಯು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು theprint.in ವರದಿ ಮಾಡಿದೆ.

ಈ ನಡುವೆ ಪೊಲೀಸರು ಬಾಲಕಿಯ ತಂದೆಯನ್ನು ಪ್ರಕರಣ ದಾಖಲಿಸಲು ಬಲವಂತಪಡಿಸಿದ್ದ ಕಾರಣ ಪ್ರಕರಣವು ವಿವಾದದ ಸ್ವರೂಪ ಪಡೆಯಿತು ಎಂದು ತಿಳಿದು ಬಂದಿದೆ. ಬಾಲಕಿಯ ತಂದೆಯ ಪ್ರಕಾರ ‘ಯುವಕನು ತನ್ನ ಮಗಳನ್ನು ಮದುವೆಯಾಗಲು, ಪರಾರಿಯಾಗಲು ಮತ್ತು ಮತಾಂತರವಾಗುವಂತೆ ಪುಸಲಾಯಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಕೇವಲ ಮತಾಂತರ ವಿರೋಧಿ ಕಾಯ್ದೆ ಮಾತ್ರವಲ್ಲದೇ ಯುವಕನ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ (ಪೋಕ್ಸೊ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು theprint.in ನೊಂದಿಗೆ ಮಾತನಾಡಿದ ಬಾಲಕಿಯ ತಂದೆ, ‘”ನನ್ನ ಮಗಳು ಆತನನ್ನು ಭೇಟಿಯಾಘಿದ್ದು ಹೌದು. ಅದೊಂದು ತಪ್ಪು. ಅದನ್ನು ಅಲ್ಲಿಯೇ ಮುಗಿಸಬಹುದಿತ್ತು. ಪ್ರಕರಣ ದಾಖಲಿಸುವ ಅವಶ್ಯಕತೆ ಇಲ್ಲವೆಂದು ನಾನು ಪೊಲೀಸರಲ್ಲಿ ಹೇಳಿದ್ದೆ. ಆದರೆ ಅವರು ಕಿವಿಗೊಡಲಿಲ್ಲ. ಬಳಿಕ ಅವರು ಪರಾರಿಯಾಗುವ ಯೋಜನೆ ಹಾಕಿಕೊಂಡಿರಲಿಲ್ಲ ಎಂದು ಕುರಿತು ನಾನು ಪೊಲೀಸರೊಂದಿಗೆ ಹೇಳಿದಾಗ, ಆಕೆ ಭವಿಷ್ಯದಲ್ಲಿ ಪರಾರಿಯಾಗುವ ಸಾಧ್ಯತೆ ಇದೆ. ನಾವು ಪ್ರಕರಣ ದಾಖಲಿಸಲೇಬೇಕು ಎಂದು ಹೇಳಿದ್ದಾಗಿ ವರದಿಯಾಗಿದೆ.

“ನಾವು ಫೋನ್ ಮುಖಾಂತರ ಮಾತನಾಡುತ್ತಿದ್ದೆವು. ಅಂದು ರಾತ್ರಿಯೂ ನಾವು ಮಾತನಾಡಿದ್ದೆವು. ಮರುದಿನ ಆತನನ್ನು ಭೇಟಿಯಾಗಲು ನಾನು ತೆರಳಿದ್ದೆ. ಆದರೆ ಇದುವರೆಗೂ ನಮ್ಮ ನಡುವೆ ಪರಾರಿಯಾಗುವ, ಮದುವೆಯಾಗುವ ಮಾತೇ ಬಂದಿಲ್ಲ ಎಂದು ಬಾಲಕಿ ಹೇಳಿದ್ದಾಳೆಂದು ವರದಿ ತಿಳಿಸಿದೆ.

ಇನ್ನು ಈ ಕುರಿತು ಮಾತನಾಡಿದ ಧಾಮ್ ಪುರ್ ಸರ್ಕಲ್ ಆಫೀಸರ್ ಅಜಯ್ ಕುಮಾರ್ “ಆಕೆ ತನ್ನ ಸ್ವಯಂ ಇಚ್ಛೆಯೊಂದಿಗೆ ತೆರಳಿದ್ದರೂ ಕೂಡಾ, ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದ ಕಾರಣ ಯುವಕನ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಇಂತಹಾ ಪ್ರಕರಣಗಳಲ್ಲಿ ಕ್ರಿಮಿನಲ್ ಚಟುವಟಿಕೆಗಳು ನಡೆಯುವ ಅವಕಾಶ ಇರುತ್ತದೆ. ಹಾಗಾಗಿ ಇಲ್ಲಿ ಬಾಲಕಿಯ ಹೇಳಿಕೆಯು ಮುಖ್ಯವೆನಿಸುವುದಿಲ್ಲ” ಎಂದು ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ. ಇನ್ನು ಪ್ರಕರಣ ದಾಖಲಿಸಲು ಪೊಲೀಸರು ಬಲವಂತಮಾಡಿದ್ದಾರೆ ಎನ್ನುವ ಬಾಲಕಿಯ ತಂದೆಯ ಆರೋಪವನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News