ಬ್ರಿಟನ್‌ನಿಂದ ಮಂಗಳೂರಿಗೆ ಬಂದವರಲ್ಲಿ ಬಹುತೇಕ ಕೊರೋನ ಸೋಂಕು ನೆಗೆಟಿವ್
ಮಂಗಳೂರು, ಡಿ.23: ಬ್ರಿಟನ್‌ನಲ್ಲಿ ಹೈಸ್ಪೀಡ್ ಮಾದರಿಯ ರೂಪಾಂತರಿ ಕೊರೋನ ಸೋಂಕು ಪತ್ತೆಯಾದ ಬೆನ್ನಲ್ಲಿ ದ.ಕ.ಕ್ಕೂ ವೈರಸ್ ಹರಡುವ ಭೀತಿ ಎದುರಾಗಿತ್ತು. ಇದೀಗ ಬಹುತೇಕರ ವರದಿ ನೆಗೆಟಿವ್ ಬಂದಿರುವುದರಿಂದ ಆತಂಕ ದೂರವಾಗಿದೆ.
ಕಳೆದ ಡಿ.7ರ ನಂತರ ಬ್ರಿಟನ್‌ನಿಂದ ದ.ಕ. ಜಿಲ್ಲೆಗೆ ಆಗಮಿಸಿದ ಒಟ್ಟು 66 ಮಂದಿಯನ್ನು ಆರೋಗ್ಯ ಇಲಾಖೆ ಗುರುತಿಸಿದ್ದು, ಅವರಲ್ಲಿ 47 ಮಂದಿಯ ಗಂಟಲು ದ್ರವ ಮಾದರಿಯನ್ನು ಬುಧವಾರ ಬೆಳಗ್ಗೆಯೇ ಸಂಗ್ರಹಿಸಿತ್ತು. ಈ ಪೈಕಿ 41 ಮಂದಿಯ ವರದಿ ಸಂಜೆ ವೇಳೆಗೆ ಲಭಿಸಿದ್ದು, ನೆಗೆಟಿವ್ ದೃಢಪಟ್ಟಿದೆ. ಉಳಿದ ಆರು ಮಂದಿಯ ವರದಿ ಇನ್ನಷ್ಟೇ ಬರಬೇಕಿದೆ. ಪರೀಕ್ಷೆಗೆ ಬಾಕಿ ಇರುವವರ ಗಂಟಲು ದ್ರವ ಮಾದರಿಯನ್ನು ಗುರುವಾರ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
66 ಮಂದಿಯಲ್ಲಿ ಮೂವರು ಈಗಾಗಲೇ ಜಿಲ್ಲೆಗೆ ಆಗಮಿಸಿ ವಾಪಸ್ ಬ್ರಿಟನ್‌ಗೆ ಹಿಂದಿರುಗಿದ್ದಾರೆ. ಜಿಲ್ಲೆಯ ಇಬ್ಬರು ಬೆಂಗಳೂರಿನಲ್ಲಿದ್ದು, ಅಲ್ಲೇ ಅವರಿಗೆ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಒಬ್ಬರು ಸ್ವದೇಶಕ್ಕೆ ಬರಲು ಟಿಕೆಟ್ ಬುಕ್ ಮಾಡಿದ್ದರೂ ಪ್ರಯಾಣ ರದ್ದುಗೊಳಿಸಿದ್ದಾರೆ. ಜಿಲ್ಲೆಗೆ ಆಗಮಿಸಿದವರಲ್ಲಿ ಅನೇಕರು ಬಂದು ಈಗಾಗಲೇ 14 ದಿನ ಕಳೆದಿದೆ. ಈ ಅವಧಿ ಮುಗಿಸಿದವರಿಗೆ ಈಗ ನೆಗೆಟಿವ್ ಬಂದಿದ್ದರೆ ಕ್ವಾರಂಟೈನ್ ಆಗುವ ಅವಶ್ಯಕತೆಯಿಲ್ಲ. ಬಹುತೇಕರ ವರದಿ ನೆಗೆಟಿವ್ ಬಂದಿರುವುದರಿಂದ ಜಿಲ್ಲೆಯ ಜನತೆ ಆತಂಕಪಡಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ.