×
Ad

ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಕಪೋಲಕಲ್ಪಿತ: ನಳಿನ್ ಕುಮಾರ್

Update: 2020-12-23 20:58 IST

ಮಂಗಳೂರು, ಡಿ.23: ಜೆಡಿಎಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಅಥವಾ ಎನ್‌ಡಿಎ ತೆಕ್ಕೆಗೆ ತರಲಾಗುತ್ತಿದೆ ಎಂಬ ವರದಿಗಳು ಕೇವಲ ಕಪೋಲಕಲ್ಪಿತ. ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಅನಿವಾರ್ಯತೆ ಬಿಜೆಪಿಗಿಲ್ಲ. ಬಿಜೆಪಿ ಬಲಿಷ್ಠವಾಗಿದ್ದು, ಯಾವುದೇ ಪಕ್ಷಗಳ ಅವಶ್ಯಕತೆಯಿಲ್ಲ ಎಂದರು.

ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಮೂಲಕ ಕ್ರಿಸ್ಮಸ್ ಆಚರಣೆ ನಡೆಸಲು ತೊಂದರೆಯಾಗುತ್ತಿದ್ದು, ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಬಿಜೆಪಿ ಸರಕಾರ ಧಕ್ಕೆ ತರುವ ಕಾರ್ಯ ಮಾಡುತ್ತಿದೆ ಎಂಬ ಆರೋಪದ ಕುರಿತ ಪ್ರಶ್ನೆಗೆ, ‘ಇಂತಹ ವಿಚಾರಗಳನ್ನು ಜಾತಿ- ಧರ್ಮದ ದೃಷ್ಟಿಕೋನದಿಂದ ನೋಡಬಾರದು. ರೋಗಕ್ಕೆ ಯಾವುದೇ ಜಾತಿ, ಧರ್ಮ, ಭೇದವಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುವವರಿಗೆ ಪ್ರತಿಯೊಬ್ಬರ ಪ್ರಾಣವೂ ಶ್ರೇಷ್ಠವಾಗಿದೆ. ಪ್ರಜೆಗಳ ಆರೋಗ್ಯ ರಕ್ಷಣೆ ಸರಕಾರದ ಕರ್ತವ್ಯ’ ಎಂದರು.

ಕರಾವಳಿ ಜಿಲ್ಲೆಗಳಲ್ಲಿ ಅತಿಹೆಚ್ಚು ಜಾತ್ರೆಗಳು, ಯಕ್ಷಗಾನ, ದೀಪೋತ್ಸವಗಳು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಕ್ಕನುಗುಣವಾಗಿ ರಾಜ್ಯ ಅಥವಾ ಕೇಂದ್ರ ಸರಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಕೆಲವೊಂದು ಕಡೆಗಳಲ್ಲಿ ವಿಮಾನ ಯಾನವನ್ನೇ ರದ್ದುಪಡಿಸಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಅತಿಹೆಚ್ಚು ದೇಶಗಳಲ್ಲಿ ಮತ್ತೆ ಲಾಕ್‌ಡೌನ್ ಮಾಡುವ ಸಂದರ್ಭ ಎದುರಾಗಿದೆ. ಅಲ್ಲಿಯೂ ಕ್ರಿಸ್ಮಸ್ ಆಚರಣೆ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News