×
Ad

ಇಸ್ರೇಲ್: ಮಿತ್ರಕೂಟದಲ್ಲಿ ಬಿರುಕು; ಸಂಸತ್ ವಿಸರ್ಜನೆ

Update: 2020-12-23 21:15 IST
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಜೆರುಸಲೇಮ್, ಡಿ. 23: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಜರ್ಝರಿತ ಆಡಳಿತಾರೂಢ ಮೈತ್ರಿಕೂಟವು ಬಜೆಟ್‌ಗೆ ಅಂಗೀಕಾರ ನೀಡುವಲ್ಲಿ ವಿಫಲಗೊಂಡ ಬಳಿಕ ದೇಶದ ಸಂಸತ್ತನ್ನು ಬುಧವಾರ ವಿಸರ್ಜಿಸಲಾಗಿದೆ.

 ಇದರೊಂದಿಗೆ ದೇಶದಲ್ಲಿ ಅಭೂತಪೂರ್ವ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ಎರಡು ವರ್ಷಗಳಲ್ಲಿ ನಾಲ್ಕನೇ ಚುನಾವಣೆಯತ್ತ ದೇಶ ಮುಖ ಮಾಡಿದೆ.

ನೆತನ್ಯಾಹು ಮತ್ತು ಅವರ ಮಾಜಿ ಚುನಾವಣಾ ಪ್ರತಿಸ್ಪರ್ಧಿ ಹಾಗೂ ಹಾಲಿ ರಕ್ಷಣಾ ಸಚಿವ ಬೆನ್ನಿ ಗಾಂಟ್ಝ್ ನೇತೃತ್ವದ ಮೈತ್ರಿಕೂಟವು ಹಲವು ವಾರಗಳಿಂದ ಬಿಕ್ಕಟ್ಟಿನಲ್ಲಿತ್ತು ಹಾಗೂ ಕುಸಿತದತ್ತ ದಾಪುಗಾಲಿಡುತ್ತಿತ್ತು. ಈ ಇಬ್ಬರು ನಾಯಕರ ನಡುವಿನ ಜಿದ್ದು ಮತ್ತು ಪರಸ್ಪರ ಅಪನಂಬಿಕೆಯೇ ಇದಕ್ಕೆ ಕಾರಣವಾಗಿದೆ.

ಈಗ ಸಂಸತ್ತಿನ ವಿಸರ್ಜನೆಯಾದ ಬಳಿಕ, ಚುನಾವಣೆಯು ಮಾರ್ಚ್ 23ರ ವೇಳೆಗೆ ನಡೆಯುವ ಸಾಧ್ಯತೆಯಿದೆ. ಕೊರೋನ ವೈರಸ್‌ನ ದಾಂಧಲೆ ಮತ್ತು ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆ ಚುರುಕುಗೊಳ್ಳುತ್ತಿರುವ ನಡುವೆಯೇ, ನೆತನ್ಯಾಹು ಇನ್ನೊಂದು ಚುನಾವಣೆಯನ್ನು ಎದುರಿಸುವ ಸಾಧ್ಯತೆಗಳಿವೆ.

ನೆತನ್ಯಾಹುರ ಬಲಪಂಥೀಯ ಲಿಕುಡ್ ಪಕ್ಷ ಮತ್ತು ಗಾಂಟ್ಝ್‌ರ ನಡುಪಂಥೀಯ ಬ್ಲೂ ಆ್ಯಂಡ್ ವೈಟ್ ಪಕ್ಷಗಳನ್ನೊಳಗೊಂಡ ಮೈತ್ರಿಕೂಟಕ್ಕೆ 2020ರ ಬಜೆಟ್ ಅಂಗೀಕರಿಸಲು ಮಂಗಳವಾರ ಮಧ್ಯರಾತ್ರಿಯವರೆಗೆ ಕಾಲಾವಕಾಶವಿತ್ತು. ಆದರೆ, ಅದರಲ್ಲಿ ಮೈತ್ರಿಕೂಟವು ವಿಫಲವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News