×
Ad

ರೂಪಾಂತರಿತ ಕೊರೋನ ಸೋಂಕು: ಹೊಸ ನಿಯಮದಿಂದ ವಿಮಾನನಿಲ್ದಾಣಗಳಲ್ಲಿ ಗೊಂದಲ

Update: 2020-12-23 21:23 IST
ಸಾಂದರ್ಭಿಕ ಚಿತ್ರ

ಮುಂಬೈ, ಡಿ.23: ರೂಪಾಂತರಿತ ಕೊರೋನ ಸೋಂಕು ಹರಡದಂತೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಜಾರಿಗೊಳಿಸಿದ ಹೊಸ ನಿಯಮ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಬುಧವಾರ ಗೊಂದಲ, ಅವ್ಯವಸ್ಥೆಗೆ ಕಾರಣವಾಗಿದೆ ಎಂದು ವರದಿಯಾಗಿದೆ.

ಇತರ ಕೆಲವು ದೇಶಗಳಂತೆಯೇ, ಭಾರತವೂ ಬ್ರಿಟನ್‌ನಿಂದ ಬರುವ ಮತ್ತು ಬ್ರಿಟನ್‌ಗೆ ತೆರಳುವ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದು ಬುಧವಾರದಿಂದ ಈ ನಿಯಮ ಜಾರಿಗೆ ಬಂದಿದೆ. ಈ ಮಧ್ಯೆ ಮಂಗಳವಾರ ತಡರಾತ್ರಿ ಬ್ರಿಟನ್‌ನಿಂದ ಭಾರತಕ್ಕೆ ತಲುಪಿದ ವಿಮಾನ ಪ್ರಯಾಣಿಕರು ಕಡ್ಡಾಯವಾಗಿ ಸೋಂಕು ಪರೀಕ್ಷೆಗೆ ಒಳಪಡಬೇಕಾಯಿತು. ಕೊರೋನ ಸೋಂಕು ಪರೀಕ್ಷೆಗೆ ಮುಂಗಡ ಬುಕ್ಕಿಂಗ್ ಮಾಡಿಸಿದ್ದರೂ, ಪರೀಕ್ಷೆಯ ವರದಿಗಾಗಿ ವಿಮಾನ ನಿಲ್ದಾಣದ ಹಾಲ್‌ನಲ್ಲಿ 9 ಗಂಟೆ ಕಾಯಬೇಕಾಯಿತು.

ಕೊರೋನ ಸೋಂಕು ಪರೀಕ್ಷೆಯ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸುರಕ್ಷಿತ ಅಂತರ ನಿಯಮ ಪಾಲನೆಯಾಗುತ್ತಿಲ್ಲ. ಕೊರೋನ ಪರೀಕ್ಷೆ ನಡೆಸಲು ಪ್ರಯಾಣಿಕರು ಮಾರುದ್ದದ ಸರತಿ ಸಾಲಿನಲ್ಲಿ ಕಾಯಬೇಕಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊರೋನದಿಂದ ಅತ್ಯಧಿಕ ಸಂಕಷ್ಟಕ್ಕೆ ಒಳಗಾಗಿರುವ ಮಹಾರಾಷ್ಟ್ರದಲ್ಲಿ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯುರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಬರುವ ಬಹುತೇಕ ಪ್ರಯಾಣಿಕರನ್ನು ಒಂದು ವಾರದ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಸೋಮವಾರ ಮುಂಬೈಗೆ ಆಗಮಿಸಿದ್ದು ವಿಮಾನ ನಿಲ್ದಾಣದಲ್ಲಿ ನಡೆಸಿದ ಕೊರೋನ ಸೋಂಕು ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ ಎಂದು 54 ವರ್ಷದ ಬ್ರಿಟಿಷ್ ಪ್ರಜೆ ಹೇಳಿದ್ದಾರೆ. ಉದ್ದೇಶ ಒಳ್ಳೆಯದ್ದೇ, ಆದರೆ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂದವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News