ಮುಖ್ಯಮಂತ್ರಿ ಖಟ್ಟರ್ ಅವರ ಬೆಂಗಾವಲು ವಾಹನಗಳ ತಡೆದ ಪ್ರಕರಣ: ಹರ್ಯಾಣದಲ್ಲಿ 13 ರೈತರ ವಿರುದ್ಧ ಪ್ರಕರಣ ದಾಖಲು
ಅಂಬಾಲ, ಡಿ. 23: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಗುಂಪೊಂದು ಪ್ರತಿಭಟನೆ ನಡೆಸಿದ ಹಾಗೂ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಬೆಂಗಾವಲು ವಾಹನಗಳನ್ನು ತಡೆದ, ದೊಣ್ಣೆಗಳಿಂದ ದಾಳಿ ನಡೆಸಿದ ಬಳಿಕ 13 ಮಂದಿ ರೈತರ ವಿರುದ್ಧ ಹರ್ಯಾಣ ಪೊಲೀಸರು ಬುಧವಾರ ಗಲಭೆ ಹಾಗೂ ಹತ್ಯೆ ಯತ್ನ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಖಟ್ಟರ್ ಅವರ ಬೆಂಗಾವಲು ವಾಹನ ಮಂಗಳವಾರ ಅಂಬಾಲ ನಗರದ ಮೂಲಕ ಹಾದು ಹೋಗುತ್ತಿರುವ ಸಂದರ್ಭ ಪ್ರತಿಭಟನಾ ನಿರತ ರೈತರ ಗುಂಪೊಂದು ಕರಿ ಪತಾಕೆ ಪ್ರದರ್ಶಿಸಿತ್ತು. ಕೆಲವು ರೈತರು ಖಟ್ಟರ್ ಅವರ ಬೆಂಗಾವಲು ವಾಹನಗಳ ಸಂಚಾರಕ್ಕೆ ತಡೆ ಒಡ್ಡಲು ಪ್ರಯತ್ನಿಸಿದರು. ಆದರೆ, ಪೊಲೀಸರು ರೈತರನ್ನು ಚದುರಿಸಿ ಖಟ್ಟರ್ ಅವರ ಬೆಂಗಾವಲು ವಾಹನಗಳು ಸುರಕ್ಷಿತವಾಗಿ ಸಾಗಲು ಅನುವು ಮಾಡಿ ಕೊಟ್ಟಿದ್ದರು.
ಕೆಲವು ಭದ್ರತಾ ಸಿಬ್ಬಂದಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಕೆಲವು ರೈತರು ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದರು ಹಾಗೂ ವಾಹನಗಳ ಸಂಚಾರಕ್ಕೆ ಕೆಲವು ಕಾಲ ತಡೆ ಒಡ್ಡಿದ್ದರು. ಬೆಂಗಾವಲು ವಾಹನಗಳಲ್ಲಿದ್ದ ಕೆಲವು ವಾಹನಗಳ ಮೇಲೆ ರೈತರು ದೊಣ್ಣೆಗಳನ್ನು ಎಸೆದರು ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.