ರಶ್ಯ: ಮಾಜಿ ಅಧ್ಯಕ್ಷರಿಗೆ ಜೀವನ ಪರ್ಯಂತ ಶಿಕ್ಷೆಯಿಂದ ವಿನಾಯಿತಿ; ಮಸೂದೆಗೆ ಅಧ್ಯಕ್ಷ ಪುಟಿನ್ ಸಹಿ
Update: 2020-12-23 22:03 IST
ಮಾಸ್ಕೋ (ರಶ್ಯ), ಡಿ. 23: ಅಧಿಕಾರದಿಂದ ನಿರ್ಗಮಿಸಿದ ಬಳಿಕ ಮಾಜಿ ಅಧ್ಯಕ್ಷರುಗಳಿಗೆ ಜೀವಮಾನ ಪೂರ್ತಿ ಕಾನೂನು ವಿಚಾರಣೆಯಿಂದ ವಿನಾಯಿತಿ ನೀಡುವ ಮಸೂದೆಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ಸಹಿ ಹಾಕಿದ್ದಾರೆ.
ಮಂಗಳವಾರ ಆನ್‌ಲೈನ್‌ನಲ್ಲಿ ಪ್ರಕಟಿಸಲಾದ ಮಸೂದೆಯು, ತಮ್ಮ ಜೀವಿತಾವಧಿಯಲ್ಲಿ ಮಾಡಿರುವ ಅಪರಾಧಗಳಿಗಾಗಿ ಮಾಜಿ ಅಧ್ಯಕ್ಷರು ಮತ್ತು ಅವರ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸುವುದನ್ನು ತಡೆಯುತ್ತದೆ. ಅವರ ನಿವಾಸಗಳಲ್ಲಿ ಶೋಧ ನಡೆಸುವುದು ಮತ್ತು ಅವರನ್ನು ಬಂಧಿಸುವಂತೆಯೂ ಇಲ್ಲ.
ಈ ಮಸೂದೆಯು, ಕಳೆದ ಬೇಸಿಗೆಯಲ್ಲಿ ರಾಷ್ಟ್ರವ್ಯಾಪಿ ಮತದಾನದ ಮೂಲಕ ಅನುಮೋದನೆ ಪಡೆದುಕೊಳ್ಳಲಾದ ಸಾಂವಿಧಾನಿಕ ಸುಧಾರಣೆಗಳ ಭಾಗವಾಗಿದೆ. ಈ ಸಾಂವಿಧಾನಿಕ ಸುಧಾರಣೆಯು, 68 ವರ್ಷದ ಪುಟಿನ್‌ಗೆ 2036ರವರೆಗೂ ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶ ನೀಡುತ್ತದೆ.