ಉಮರ್ ಖಾಲಿದ್ ಜೈಲಿನಿಂದ ಬಿಡುಗಡೆಗೊಳ್ಳುವುದನ್ನು ನೋಡಲು ನಾನು ಬಯಸಿದ್ದೇನೆ: ಮಹಾತ್ಮಾ ಗಾಂಧಿ ಮೊಮ್ಮಗ

Update: 2020-12-23 18:12 GMT

ಹೊಸದಿಲ್ಲಿ, ಡಿ.23: ಫೆಬ್ರವರಿ ತಿಂಗಳಲ್ಲಿ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ರನ್ನು ಬಂಧಿಸಿ ನೂರು ದಿನಗಳು ಕಳೆದಿವೆ. ಈ ಕುರಿತಾದಂತೆ ಕಾರವಾನ್ ಎ ಹಿಂದುಸ್ತಾನ್ ಬಿಡುಗಡೆಗೊಳಿಸಿದ ವೀಡಿಯೋದಲ್ಲಿ ಮಹಾತ್ಮಾ ಗಾಂಧಿ ಮೊಮ್ಮಗ ರಾಜ್ ಮೋಹನ್ ಗಾಂಧಿ ಮಾತನಾಡಿದ್ದು, ಉಮರ್ ಖಾಲಿದ್ ಜೈಲಿನಿಂದ ಬಿಡುಗಡೆಗೊಳ್ಳುವುದನ್ನು ನನಗೆ ನೋಡಬೇಕಿದೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ. Scroll.in ಈ ಕುರಿತಾದಂತೆ ವರದಿ ಮಾಡಿದೆ.

“ಉಮರ್ ಖಾಲಿದ್ ಜೈಲಿನಿಂದ ಬಿಡುಗಡೆಗೊಳ್ಳುವುದನ್ನು ನನಗೆ ನೋಡಬೇಕಾಗಿದೆ. ನಾನು ಹಲವಾರು ವ್ಯಕ್ತಿಗಳನ್ನು ಅಧ್ಯಯನ ಮಾಡಿದ್ದೇನೆ. ಅನುಕೂಲಸ್ಥ ಕುಟುಂಬ, ಸುಖ ಸಂತೋಷದಿಂದ ಇರಬೇಕಿದ್ದ ಯುವಕನೋರ್ವ ಯಾಕೆ ಸ್ವತಃ ತನ್ನನ್ನೇ ಆದಿವಾಸಿಗಳ ಬದುಕಿಗಾಗಿ ಮುಡಿಪಾಗಿಟ್ಟ?  ಇನ್ನೊಬ್ಬರ ನೋವನ್ನು ತನ್ನ ಹೃದಯಕ್ಕೆ ಯಾಕೆ ತುಂಬಿಸಿಕೊಂಡ? ನನಗೆ ಮಾತ್ರವಲ್ಲ ಉಮರ್ ನನ್ನು ನೋಡಬೇಕಾಗಿರುವುದು. ಜಾರ್ಖಂಡ್ ಭಾಗದ ಹಲವಾರು ದಮನಿತರಿಗೆ, ಆದಿವಾಸಿಗಳಿಗೆ ಉಮರ್ ನ ಅವಶ್ಯಕತೆಯಿದೆ. ಅವರ ಭವಿಷ್ಯ ಮತ್ತು ಗೌರವವನ್ನು ಕಾಪಾಡಲು ಅವರಿಗೆ ಓರ್ವ ಸ್ನೇಹಿತನ ಅವಶ್ಯಕತೆಯಿದೆ”.

“ಸಾಮರಸ್ಯದ ಭಾರತಕ್ಕಾಗಿ ನಮಗೆ ಉಮರ್ ಖಾಲಿದ್ ನ ಅವಶ್ಯಕತೆಯಿದೆ. ಆದರೆ ಇಂದು ಉಮರ್ ಖಾಲಿದ್ ನಂತೆ ನ್ಯಾಯಕ್ಕಾಗಿ ಹೋರಾಡುತ್ತಿರುವ ಹಲವಾರು ಮಂದಿ ಯುವಕರು ಜೈಲಿನಲ್ಲಿ ತಮ್ಮ ಜೀವನ ಕಳೆಯುತ್ತಿದ್ದಾರೆ. ಅದು ನಿಜಕ್ಕೂ ಮನುಷ್ಯ ಪ್ರತಿಭೆಯನ್ನು ಬಹುದೊಡ್ಡ ಪ್ರಮಾಣದಲ್ಲಿ ವ್ಯರ್ಥ ಮಾಡುತ್ತಿದೆ. ದೇಶದ ಒಳಿತಿಗಾಗಿ ಉಮರ್ ಖಾಲಿದ್ ನನ್ನು ಬಿಡುಗಡೆ ಮಾಡಿ ಎಂದು ಮಾತ್ರವಲ್ಲ, ಇದೊಂದು ಮಾನವ ಹಕ್ಕು ಕೂಡಾ.”

ಹಲವು ವರ್ಷಗಳ ಮುಂಚೆ, 1947 ಆಗಸ್ಟ್ 15 ರಂದು 12 ವರ್ಷದ ಬಾಲಕನಾಗಿದ್ದ ನಾನು ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ದೆ. ಆದರೆ, ಭಾರತೀಯನೋರ್ವನಿಗೆ ಸ್ವಾತಂತ್ರ್ಯ ನಿರಾಕರಣೆಗೊಂಡರೆ ಭಾರತಕ್ಕೆ ಸಿಕ್ಕಿದ ಸ್ವಾತಂತ್ರ್ಯವು ಅರ್ಥ ಕಳೆದುಕೊಳ್ಳುತ್ತದೆ. ಅಮೆರಿಕಾದ ಸಂವಿಧಾನವನ್ನು ರಚಿಸುವ ವೇಳೆ ಬಿಳಿಯರ ಮತ್ತು ಕರಿಯರ ಪ್ರಮಾಣದಲ್ಲಿ ವ್ಯತ್ಯಾಸಗಳಿದ್ದವು. ಆದರೆ ಭಾರತದ ಸಂವಿಧಾನದಲ್ಲಿ ದಲಿತನಿಗೆ, ಮುಸ್ಲಿಮನಿಗೆ, ಬ್ರಾಹ್ಮಣನಿಗೆ ಎನ್ನುವ ಬೇಧ ಇರಲಿಲ್ಲ. ಎಲ್ಲರಿಗೂ ಒಂದೇ ಸ್ಥಾನಮಾನ ಮತ್ತು ಹಕ್ಕು ಇದೆ”

“ಹಿಂದೂ, ಮುಸ್ಲಿಮ್, ಸಿಖ್, ಕ್ರಿಶ್ಚಿಯನ್ ಎಲ್ಲರಿಗೂ ಎಲ್ಲಾ ಹಕ್ಕುಗಳನ್ನೂ ಭಾರತ ಸಂವಿಧಾನ ನೀಡಿದೆ. ಭಾರತವು ಎಷ್ಟು ನನ್ನದೋ, ಅಷ್ಟೇ ಉಮರ್ ಖಾಲಿದ್ ನದ್ದೂ ಹೌದು. ಹಾಗಾಗಿ ಭಾರತದ ಸಂವಿಧಾನದ ಆರ್ಟಿಕಲ್ 10ರ ಪ್ರಕಾರ ಉಮರ್ ಖಾಲಿದ್ ರನ್ನು ಆದಷ್ಟು ಬೇಗನೇ ಬಿಡುಗಡೆ ಮಾಡಬೇಕು” ಎಂದು ಮಹಾತ್ಮಾ ಗಾಂಧಿಯ ಮೊಮ್ಮಗ ರಾಜ್ ಮೋಹನ್ ಗಾಂಧಿ ವೀಡಿಯೋ ಮುಖಾಂತರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News