×
Ad

ಕಾಸರಗೋಡು: ಡಿವೈಎಫ್ಐ ಕಾರ್ಯಕರ್ತನನ್ನು ಇರಿದು ಹತ್ಯೆಗೈದ ತಂಡ

Update: 2020-12-24 09:11 IST

ಕಾಸರಗೋಡು: ಡಿವೈಎಫ್ಐ ಕಾರ್ಯಕರ್ತನೋರ್ವನನ್ನು ತಂಡವೊಂದು ಇರಿದು ಕೊಲೆಗೈದ ಘಟನೆ ಬುಧವಾರ ರಾತ್ರಿ ಕಾಞಂಗಾಡ್ ನಲ್ಲಿ ನಡೆದಿದೆ.

ಮೃತರನ್ನು ಅಬ್ದುಲ್ ರಹ್ಮಾನ್ (29) ಎಂದು ಗುರುತಿಸಲಾಗಿದೆ.

ಕಲ್ಲೂರಾವಿ ನಿವಾಸಿಯಾಗಿದ್ದ ರಹ್ಮಾನ್ ಬೈಕ್ ನಲ್ಲಿ  ಸ್ನೇಹಿತನ ಜೊತೆ ಮನೆಗೆ ತೆರಳುತ್ತಿದ್ದಾಗ ಕಲ್ಲೂರಾವಿ-ಹಳೆ ಕಡಪ್ಪುರ ರಸ್ತೆಯಲ್ಲಿ
ತಂಡವೊಂದು ಈ ಕೃತ್ಯ ನಡೆಸಿದೆ ಎಂದು ತಿಳಿದುಬಂದಿದೆ.

ಬೈಕನ್ನು ತಡೆದ ತಂಡವು ರಹ್ಮಾನ್ ಅವರಿಗೆ ಇರಿದು ಪರಾರಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ಅಬ್ದುಲ್ ರಹ್ಮಾನ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಜೊತೆಗಿದ್ದ ಶುಹೈಬ್ ಎಂಬವರು ಗಾಯಗೊಂಡಿದ್ದಾರೆ ಎಂದು ದೂರಲಾಗಿದೆ.

ಕೃತ್ಯದ ಸಂದರ್ಭ ಓರ್ವ ಆರೋಪಿಗೂ ಗಾಯವಾಗಿದ್ದು, ಇರ್ಷಾದ್ ( 26) ಎಂಬಾತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯದ ಹಿಂದೆ ಮುಸ್ಲಿಂ ಲೀಗ್ ಕಾರ್ಯಕರ್ತರ ಕೈವಾಡ ಇದೆ ಎಂದು ಡಿವೈಎಫ್ಐ ಆರೋಪಿಸಿದೆ.

ಕೃತ್ಯ ಖಂಡಿಸಿ ಕಾಞಂಗಾಡ್  ನಗರಸಭಾ ವ್ಯಾಪ್ತಿಯಲ್ಲಿ ಇಂದು ಹರತಾಳಕ್ಕೆ ಡಿವೈಎಫ್ಐ ಕರೆ ನೀಡಿದೆ. ರಾಜಕೀಯ ದ್ವೇಷ ಕೃತ್ಯಕ್ಕೆ ಕಾರಣ ಎಂದು  ಶಂಕಿಸಲಾಗಿದೆ.

ಇತ್ತೀಚಿಗೆ ನಡೆದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ವಿಜಯೋತ್ಸವ ಸಂದರ್ಭ ಡಿವೈಎಫ್ಐ ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಇದಕ್ಕೆ ಪ್ರತಿಕಾರ ಎಂಬಂತೆ ಈ ಕೃತ್ಯ ನಡೆದಿರಬಹುದು ಎಂದು ಸಂಶಯಿಸಲಾಗಿದೆ. ಕೃತ್ಯದಲ್ಲಿ ಆರು ಮಂದಿ ಶಾಮೀಲಾಗಿದ್ದರು ಎಂಬ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಮೂರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾಞಂಗಾಡ್ ಡಿವೈಎಸ್ಪಿ ವಿನೋದ್ ನೇತೃತ್ವದಲ್ಲಿ ತನಿಖೆ ಆರಂಭಿಸಿದೆ, ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News