×
Ad

ಭಾರತ ಕ್ರಿಕೆಟ್ ತಂಡದಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮ: ಗವಾಸ್ಕರ್ ಆರೋಪ

Update: 2020-12-24 13:12 IST

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ಆಡಳಿತದ ವಿರುದ್ಧ ಹರಿಹಾಯ್ದ ಭಾರತದ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್, ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮವಿದೆ ಎಂದರು. ಎಡಗೈ ವೇಗದ ಬೌಲರ್ ಟಿ.ನಟರಾಜನ್ ಅವರ ಉದಾಹರಣೆ ನೀಡಿದ ಗವಾಸ್ಕರ್, ಹೊಸಬರು ಈ ನಿಯಮಗಳ ಕುರಿತು ಅಚ್ಚರಿಪಡುತ್ತಾರೆ ಎಂದಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿಗೆ ರಜೆ ನೀಡಿ, ಈಗಾಗಲೇ ಮಗುವಿನ ತಂದೆಯಾಗಿರುವ ನಟರಾಜನ್‌ಗೆ ರಜೆ ನೀಡದ ತಂಡದ ಆಡಳಿತದ ವಿಭಿನ್ನ ನಿಯಮವನ್ನು ಬೆಟ್ಟು ಮಾಡಿರುವ ಗವಾಸ್ಕರ್, ಇಂತಹ ನಿಯಮಗಳಿಂದ ನಟರಾಜನ್‌ಗೆ ಅಚ್ಚರಿಯಾಗಿರಬಹುದು. ಅವರು ಹೊಸ ಆಟಗಾರನಾಗಿರುವ ಕಾರಣ ಏನೂ ಹೇಳುವಂತಿಲ್ಲ. ಎಡಗೈ ಬೌಲರ್ ನಟರಾಜನ್ ಚೊಚ್ಚಲ ಟ್ವೆಂಟಿ-20 ಪಂದ್ಯದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ಹಾರ್ದಿಕ್ ಪಾಂಡ್ಯ ಅವರು ಸರಣಿಶ್ರೇಷ್ಠ ಪ್ರಶಸ್ತಿಯನ್ನು ನಟರಾಜನ್‌ರೊಂದಿಗೆ ಹಂಚಿಕೊಂಡಿದ್ದರು. ನಟರಾಜನ್ ಐಪಿಎಲ್ ಪ್ಲೇ ಆಫ್ ಪಂದ್ಯ ನಡೆಯುತ್ತಿದ್ದಾಗಲೇ ಹೆಣ್ಣು ಮಗುವಿಗೆ ಅಪ್ಪನಾಗಿದ್ದರು. ನಟರಾಜನ್‌ಗೆ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಗಾಗಿ ಉಳಿಯುವಂತೆ ತಿಳಿಸಲಾಗಿತ್ತು. ಅಷ್ಟಕ್ಕೂ ನಟರಾಜನ್ ಭಾರತೀಯ ಟೆಸ್ಟ್ ತಂಡದ ಭಾಗವಾಗಿರಲಿಲ್ಲ. ಅವರು ನೆಟ್ ಬೌಲರ್ ಆಗಿದ್ದರು. ಜನವರಿ ಮೂರನೇ ವಾರದಲ್ಲಿ ಟೆಸ್ಟ್ ಸರಣಿ ಮುಗಿದ ಬಳಿಕವಷ್ಟೇ ನಟರಾಜನ್ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ಆಗ ಅವರು ತನ್ನ ಮಗಳನ್ನು ಮೊದಲ ಬಾರಿ ನೋಡಬಹುದು. ನಾಯಕ ಕೊಹ್ಲಿ ಅವರು ಮೊದಲ ಟೆಸ್ಟ್ ಪಂದ್ಯ ಮುಗಿದ ತಕ್ಷಣವೇ ಭಾರತಕ್ಕೆ ವಾಪಸಾಗಲು ಅನುಮತಿ ನೀಡಲಾಗಿದೆ ಎಂದು ಗವಾಸ್ಕರ್ ಕಾಲಂನಲ್ಲಿ ಬರೆದಿದ್ದಾರೆ.

ಅಶ್ವಿನ್ ಅವರು ತಂಡದ ಮೀಟಿಂಗ್ ವೇಳೆ ಮನಸ್ಸು ಬಿಚ್ಚಿ ಮಾತನಾಡುತ್ತಾರೆ. ಅವರು ಒಂದು ಪಂದ್ಯದಲ್ಲಿ ವಿಕೆಟ್ ಪಡೆಯದೇ ಇದ್ದರೆ ಮುಂದಿನ ಪಂದ್ಯದಲ್ಲಿ ಅವರಿಗೆ ಸ್ಥಾನ ನೀಡಲಾಗುವುದಿಲ್ಲ. ಹಿರಿಯ ಬ್ಯಾಟ್ಸ್‌ಮನ್‌ಗೆ ಹೀಗೆ ಮಾಡಲಾಗುವುದಿಲ್ಲ. ಇದು ಭಾರತೀಯ ಕ್ರಿಕೆಟ್‌ನ ಈಗಿನ ಸ್ಥಿತಿ. ಒಬ್ಬೊಬ್ಬರಿಗೆ ಒಂದೊಂದು ನಿಯಮಗಳಿವೆ. ನನ್ನ ಮೇಲೆ ನಂಬಿಕೆ ಬಾರದಿದ್ದರೆ ರವಿಚಂದ್ರನ್ ಅಶ್ವಿನ್ ಹಾಗೂ ಟಿ.ನಟರಾಜನ್‌ರಲ್ಲಿ ಕೇಳಿ ಎಂಬ ವಾಕ್ಯದೊಂದಿಗೆ ಗವಾಸ್ಕರ್ ತಮ್ಮ ಅಂಕಣಬರಹ ಮುಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News