ಕಾರ್ಮಿಕರ ಕಲ್ಯಾಣದ ಬಗ್ಗೆ ಚಿಂತಿಸಲು ಮಿಷ್ಟ್ರಾನ್ ಘಟನೆ ಪಾಠವಾಗಲಿ : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
ಬೆಂಗಳೂರು, ಡಿ. 24: ಪ್ರಜಾಪ್ರಭುತ್ವದಲ್ಲಿ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಹೊಣೆ ಸರಕಾರದ ಜವಾಬ್ದಾರಿಯಾಗಿದೆ. ಆದರೆ ಸರಕಾರಗಳು ಇಂದು ಬಹು ರಾಷ್ಟ್ರೀಯ ಬೃಹತ್ ಹೂಡಿಕೆದಾರ ಉದ್ಯಮದ ಪರವಾಗಿ ವಕಾಲತ್ತು ವಹಿಸಿದ ವಕೀಲನೆಂಬಂತೆ ವರ್ತಿಸುವುದಲ್ಲದೆ, ಕಾರ್ಮಿಕರ ನ್ಯಾಯಬದ್ಧ ಬೇಡಿಕೆಯನ್ನು ಕೂಡಾ ಪರಿಗಣಿಸದೆ ಅವರನ್ನು ಆರೋಪಿಗಳಾಗಿಸುವ ಕೇಂದ್ರ ಸರ್ಕಾರದ ಧೋರಣೆ ಮತ್ತು ಅದರಲ್ಲೇ ಸಹಮತ ತೋರುವ ರಾಜ್ಯ ಸರ್ಕಾರದ ನಿಲುವು ಬಹಳ ಅಪಾಯಕಾರಿಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷ ಅಡ್ವೋಕೇಟ್ ಸರ್ಫ್ ರಾಝ್ ಹೇಳಿದ್ದಾರೆ.
ಇತ್ತೀಚೆಗೆ ಸಂಭವಿಸಿದ ಮಿಷ್ಟ್ರಾನ್ ಘಟನೆಯ ಉದಾಹರಣೆಯನ್ನೇ ತೆಗೆದುಕೊಂಡರೆ ಗುತ್ತಿಗೆಯ ಆಧಾರದಲ್ಲಿ ಕೆಲಸ ಮಾಡುವ ನೌಕರರಿಗೆ ಎಲ್ಲಾ ತಿಂಗಳುಗಳಲ್ಲಿಯೂ ಸರಿಯಾಗಿ ವೇತನ ನೀಡದೆ ಹೇಗೆ ಸತಾಯಿಸುತ್ತಿದ್ದರು ಎಂಬುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ಹೇಳಿದರು.
ಬೃಹತ್ ಉದ್ಯಮದ ಪರ ಬ್ಯಾಟ್ ಬೀಸುವ ಕೇಂದ್ರ ಸರ್ಕಾರದ ಧೋರಣೆ ಮತ್ತು ಅದರಲ್ಲೇ ಸಹಮತ ತೋರುವ ರಾಜ್ಯ ಸರ್ಕಾರ ತಮ್ಮ ಇಂತಹ ಧೋರಣೆಗಳನ್ನು ಬಿಟ್ಟು ಕಾರ್ಮಿಕರ ಕಲ್ಯಾಣದ ಬಗ್ಗೆ ಚಿಂತಿಸಲು ಮತ್ತು ಯಾವುದೇ ವಿವಾದ ವಿಷಯಗಳಲ್ಲಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡದೆ ವಸ್ತುಸ್ಥಿತಿಯನ್ನು ಸರಿಯಾಗಿ ಅರಿಯುವ ಪ್ರಯತ್ನ ಮಾಡಬೇಕು. ಮಿಷ್ಟ್ರಾನ್ ಘಟನೆ ಸರಕಾರಕ್ಕೆ ಪಾಠವಾಗಬೇಕು ಮಾತ್ರವಲ್ಲ ಮುಂದೆ ಅಂತಹ ಪ್ರಮಾದಗಳು ಸಂಭವಿಸದೆ ಕಾರ್ಮಿಕರ ಮತ್ತು ಎಲ್ಲಾ ನಾಗರಿಕರ ಹಕ್ಕನ್ನು ರಕ್ಷಿಸುವಲ್ಲಿ ಸರಕಾರವು ಹೆಚ್ಚು ಬದ್ಧವಾಗಿರಬೇಕು ಎಂದರು.
ಆ್ಯಪಲ್ ಸಂಸ್ಥೆಯ ಪ್ರಾಮಾಣಿಕ ಸತ್ಯಶೋಧನಾ ವರದಿಯಿಂದ ಇಂದು ಅಮಾಯಕ ಕಾರ್ಮಿಕರಿಗೆ ನ್ಯಾಯ ಸಿಗುವಂತಹ ಸನ್ನಿವೇಶವನ್ನು ಹೊಂದಿದ್ದೇ ವಿನಃ ಸರಕಾರವು ಈ ವಿವಾದದಲ್ಲಿ ಬಡ ನೌಕರರ ಪರವಾಗಿ ಮುತುವರ್ಜಿ ವಹಿಸದಿರುವುದು ವಿಷಾದಕರ, ಮಾತ್ರವಲ್ಲ ಮಾಧ್ಯಮ ಗಳು ಮತ್ತು ರಾಜಕಾರಣಿಗಳ ಮಾತುಗಳು ಕೂಡಾ ನ್ಯಾಯವನ್ನು ಬಯಸಿ ಬೀದಿಗಿಳಿದ ಕಾರ್ಮಿಕರ ವಿರುದ್ಧವಾಗಿತ್ತು ಎಂದವರು ಹೇಳಿದರು.
ಇದೀಗ ನೈಟ್ ಕರ್ಪ್ಯೂ, ಲಾಕ್ ಡೌನ್ ಮುಂತಾದ ಪದದ ಬಳಕೆಗಳು ಮತ್ತೆ ಆರಂಭವಾಗಿದ್ದು, ಕಳೆದ ಸಲದಂತೆ ಈ ಬಾರಿ ಯಾವುದೇ ರೀತಿಯಲ್ಲಿ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುವುದನ್ನು ಸರಕಾರ ನಿಲ್ಲಿಸಬೇಕು. ಹೊಸ ಸೋಂಕು ಹರಡಿದೆ ಎನ್ನಲಾಗುವ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಇಲ್ಲಿಗೆ ಬರಲು ಪೂರ್ಣ ಅವಕಾಶ ನೀಡಿದ ಮೇಲೆ ವಿದೇಶೀ ವಿಮಾನಗಳನ್ನು ನಿರ್ಬಂಧಿಸುವುದು ಒಂದು ರಾಜಕೀಯ ಪ್ರಹಸನ ಮಾತ್ರ. ಆದ್ದರಿಂದ ರೋಗ ಹರಡುವಿಕೆಯಿಂದ ತಡೆಗಟ್ಟುವಲ್ಲಿ ಮಾತ್ರವಲ್ಲದೆ ಸರಕಾರದ ದ್ವಂದ್ವ ನೀತಿಯ ಬಗ್ಗೆಯೂ, ಮಾಧ್ಯಮರಂಗವು ಜನಜಾಗೃತಿಗೊಳಿಸಲು ಮುಂದಾಗಬೇಕಾಗಿದೆ ಎಂದು ಸರ್ಫ್ ರಾಝ್ ಹೇಳಿಕೆ ನೀಡಿದ್ದಾರೆ.