ಮೀನುಗಾರರು ಬಳಕೆ ಮಾಡುವ ಡೀಸೆಲ್ ಮೇಲಿನ ಸಬ್ಸಿಡಿ, ಪರಿಹಾರ ನೀಡಲು ಸಭಾಪತಿ ಆಗ್ರಹ
Update: 2020-12-24 15:53 IST
ಮಂಗಳೂರು : ಕಳೆದ ನಾಲ್ಕು ತಿಂಗಳಿಂದ ಮೀನುಗಾರರು ಬಳಸುವ ಡೀಸೆಲ್ ಮೇಲಿನ ಸಹಾಯಧನ ಸಬ್ಸಿಡಿ ಹಣವನ್ನು ಕರ್ನಾಟಕ ರಾಜ್ಯ ಸರಕಾರ ನೀಡದೆ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಅಲ್ಲದೆ ಲಾಕ್ಡೌನ್ ಸಮಯದಲ್ಲಿ ಮೀನುಗಾರರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಮಾಜಿ ಶಾಸಕ, ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಯು.ಆರ್. ಸಭಾಪತಿ ಹೇಳಿದ್ದಾರೆ.
ಕಳೆದ ವರ್ಷದ ಮೀನುಗಾರ ಋತುವಿನಲ್ಲಿ ಲಾಕ್ಡೌನ್ ಆದ ಸಂದರ್ಭದಲ್ಲಿ ಮೀನುಗಾರರು ಬಹಳಷ್ಟು ಸಂಕಷ್ಟಕ್ಕೊಳಗಾಗಿದ್ದು ಅವರಿಗೆ ಸೂಕ್ತ ಪರಿಹಾರವನ್ನು ಒದಗಿಸಿ ಕೊಡಬೇಕೆಂದು ಸಭಾಪತಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಸರಕಾರ ಈ ಕೂಡಲೇ ಬಾಕಿ ಇರುವ ನಾಲ್ಕು ತಿಂಗಳ ಸಬ್ಸಿಡಿ ಹಣವನ್ನು ಬಿಡುಗಡೆಗೊಳಿಸಬೇಕು ಮತ್ತು ಮೀನುಗಾರರ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಬೇಕಾಗಬಹುದೆಂದು ಸಭಾಪತಿ ಎಚ್ಚರಿಸಿದ್ದಾರೆ.