ಅಂಚೆ ಕಚೇರಿಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್ : ಶ್ರೀಹರ್ಷ
ಮಂಗಳೂರು, ಡಿ.24: ಗ್ರಾಮೀಣ ಭಾಗದ ಜನರು ಪಾನ್ ಕಾರ್ಡ್, ಚಾಲನಾ ಪರವಾನಿಗೆ, ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಲು ಆಯ್ದ ಅಂಚೆ ಕಚೇರಿಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್ ಆರಂಭಿಸಲಾಗಿದೆ ಎಂದು ಮಂಗಳೂರು ಪ್ರಧಾನ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಅಂಚೆ ಇಲಾಖೆಯ ವಿವಿಧ ಯೋಜನೆಗಳು, ಗ್ರಾಮೀಣ ಅಂಚೆ ಸೇವೆಕರ ಹುದ್ದೆಗೆ ನೇಮಾತಿ ಅರ್ಜಿ ಆಹ್ವಾನದ ವಿವರ ನೀಡಿದರು.
ಮಂಗಳೂರು ಅಂಚೆ ವಿಭಾಗಕ್ಕೊಳಪಡುವ 27 ಅಂಚೆ ಕಚೇರಿಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್‌ಗಳನ್ನು ತೆರೆಯಲಾಗಿದ್ದು, ಮುಂದೆ ನಗರದ ಇತರ ಅಂಚೆ ಕಚೇರಿಗಳಿಗೂ ಈ ಸೇವೆಯನ್ನು ವಿಸ್ತರಿಸುವ ಆಲೋಚನೆ ಇದೆ ಎಂದರು.
ಡಿಜಿಟಲ್ ಸೇವೆಗಳು ಜನಪ್ರಿಯಗೊಳುತ್ತಿರುವ ಕಾರಣ ಕಂಪ್ಯೂಟರ್ ವ್ಯವಸ್ಥೆ ಹೊಂದಿರುವ ಅಂಚೆ ಕಚೇರಿಗಳನ್ನು ಜನಹಿತ ಸೇವೆಗೆ ಬಳಸಿಕೊ ಳ್ಳಲು ಕೇಂದ್ರ ಸರಕಾರ ಉದ್ದೇಶಿಸಿದ ಕಾಮನ್ ಸರ್ವಿಸ್ ಸೆಂಟರ್‌ಗಳನ್ನು ತೆರೆದಿದೆ ಎಂದು ಶ್ರೀಹರ್ಷ ತಿಳಿಸಿದರು.
ಮಂಗಳೂರಿನ ಪ್ರಧಾನ ಅಂಚೆ ಕಚೇರಿ, ಕುಲಶೇಖರ ಪ್ರಧಾನ ಅಂಚೆ ಕಚೇರಿ, ಹಂಪನಕಚ್ಟೆ, ಕೊಡಿಯಾಲ್‌ಬೈಲ್, ಕಂಕನಾಡಿ, ಅಶೋಕ ನಗರ, ಬಿಜೈ, ಬಲ್ಮಠ, ಸುರತ್ಕಲ್, ಮುಲ್ಕಿ, ಬಜ್ಪೆ, ಪಣಂಬೂರು, ಕೊಂಚಾಡಿ, ಕಿನ್ನಿಗೋಳಿ, ಕಾಟಿಪಳ್ಲ, ಮಂಗಳಗಂಗೋತ್ರಿ, ಕಿನ್ನಿಕಂಬ್ಳ, ಗಂಜಿಮಠ, ಹಳೆಯಂಗಡಿ, ಬೆಳ್ಮಣ್, ಮುಂಡ್ಕೂರು, ಕಾವೂರು, ಕೂಳೂರು, ಕುಳಾಯಿ, ಪಡೀಲ್, ವಾಮಂಜೂರು ಮತ್ತು ಉಳ್ಳಾಲ ಅಂಚೆ ಕಚೇರಿಗಳಲ್ಲಿ ಸರ್ವಿಸ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರು ಕೇವಲ 107 ರೂ., ಗುರುತಿನ ಚೀಟಿ, ಜನ್ಮ ದಿನಾಂಕ, ವಿಳಾಸ ಪುರಾವೆಗಳನ್ನು ಪಾವತಿಸಿ ಪಾನ್ ಕಾರ್ಡ್ ಪಡೆಯಬಹುದು. ಪಾರ್ಸ್‌ಪೋರ್ಟ್ ಪ್ರಾಧಿಕಾರವು ನಿಗದಿಪಡಿಸಿದ ಪಾಸ್‌ಪೋರ್ಟ್ ಶುಲ್ಕ (1500 ರೂ.) ಹಾಗೂ 100 ರೂ. ಸೇವಾ ಶುಲ್ಕವನ್ನು ಪಾವತಿಸಿ ಮುಂಗಡ ಅಪಾಯಿಂಟ್‌ಮೆಂಟ್ ಪಡೆದು ಪಾಸ್‌ಪೋರ್ಟ್ ಮಾಡಿಸಿ ಕೊಳ್ಳಬಹುದು ಎಂದು ಶ್ರೀಹರ್ಷ ತಿಳಿಸಿದರು.
ನಗರದ 39 ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆಯನ್ನು ನೀಡಲಾಗುತ್ತಿದ್ದು, ಈಗಾಗಲೇ 23693 ಹೊಸ ನೋಂದಣಿ ಹಾಗೂ 2,39,186 ಮಂದಿ ಈ ಸೇವೆಯ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಗ್ರಾಮೀಣ ಅಂಚೆ ಸೇವಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಅಂಚೆ ವೃತ್ತವು ಕರ್ನಾಟಕದಲ್ಲಿರುವ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ನೇಮಕಾತಿ ಆದೇಶ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜನವರಿ 20ರವರೆಗೆ ವಿಸ್ತರಿಸಲಾಗಿದೆ ಎಂದು ಮಂಗಳೂರು ಪ್ರಧಾನ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದರು.
ನೇಮಕಾತಿಯು ಕಂಪ್ಯೂಟರ್ ಮೂಲಕ 10ನೆ ತರಗತಿಯ ಅಂಕಗಳ ಜೇಷ್ಠತೆ ಆಧಾರದಲ್ಲಿಯೇ ನಡೆಯಲಿದೆ. ಯಾವುದೇ ರೀತಿಯ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಯಾರಾದರೂ ಅಂಚೆ ಇಲಾಖೆಯಲ್ಲಿ ನೌಕರಿ ಒದಗಿಸುವ ಮಾಹಿತಿ ನೀಡಿ ಮೋಸ ಮಾಡುತ್ತಿದ್ದಲ್ಲಿ ದೂರು ನೀಡಬಹುದಾಗಿದೆ. ನೇಮಕಾತಿಯು ಪಾರದರ್ಶಕವಾಗಿ ಆನ್‌ಲೈನ್ ಮೂಲಕವೇ ನಡೆಯಲಿದೆ ಎಂದವರು ಹೇಳಿದರು.