ಕಾರ್ಯಕರ್ತನಿಂದಲೇ ಹಿಂಬಾಲಿಸಲ್ಪಟ್ಟ ಶಾಸಕ ಯು.ಟಿ. ಖಾದರ್ !
ಮಂಗಳೂರು, ಡಿ.24: ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರನ್ನು ಅಪರಿಚಿತರು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಶಂಕೆಯ ಮೇಲೆ ಯುವಕನನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆಗೊಳಿಸಲಾಗಿದೆ.
ಬೋಳೂರು ನಿವಾಸಿ ಅನೀಸ್ ಪೂಜಾರಿ (28) ವಿಚಾರಣೆಗೊಳಗಾಗಿ ಬಿಡುಗಡೆಯಾದ ಯುವಕ ಎಂದು ತಿಳಿದುಬಂದಿದೆ.
ಈತ ಬೋಳೂರು ವಾರ್ಡ್‌ನ ಕಾಂಗ್ರೆಸ್‌ನ ಕಾರ್ಯಕರ್ತೆಯೊಬ್ಬರ ಮಗ ಎನ್ನುವುದು ತಿಳಿದು ಬಂದಿದ್ದು, ಖಾದರ್ ಕಾರು ಹಿಂಬಾಲಿಸಿರುವುದರ ದುರುದ್ದೇಶ ಇರಲಿಲ್ಲ ಎನ್ನುವ ಅಂಶ ಮೇಲ್ನೋಟಕ್ಕೆ ಕಂಡುಬಂದ ಬಳಿಕ ಮುಚ್ಚಳಿಕೆ ಬರೆಸಿ ಬಿಟ್ಟಿದ್ದಾರೆ. ಆದರೆ ಅನೀಸ್ ಪೂಜಾರಿಯ ವಿರುದ್ಧ ಈಗಾಗಲೇ ಕಳ್ಳತನ, ದರೋಡೆ, ಗಾಂಜಾ ಸೇವನೆ ಮತ್ತತರ ಹಲವು ಕೇಸ್‌ಗಳು ದಾಖಲಾಗಿದ್ದನ್ನು ಪೊಲೀಸರು ದೃಢಪಡಿಸಿದ್ದಾರೆ. ಈ ನಡುವೆ, ‘ಖಾದರ್ ಕಾರು ಹಿಂಬಾಲಿಸಿದ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಕಾಂಗ್ರೆಸ್‌ನ ಐವನ್ ಡಿಸೋಜ ಸಹಿತ ಮುಖಂಡರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಯು.ಟಿ. ಖಾದರ್ ಬುಧವಾರ ಸಂಜೆ ದೇರಳಕಟ್ಟೆಯಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳಲು ಏರ್‌ಪೋರ್ಟ್‌ನತ್ತ ಕಾರಿನಲ್ಲಿ ತೆರಳುತ್ತಿದ್ದರು. ಹಿಂದೆ ಎಸ್ಕಾರ್ಟ್ ವಾಹನ ಹಿಂಬಾಲಿಸುತ್ತಿತ್ತು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅನೀಸ್ ತನ್ನ ಬೈಕ್‌ನಲ್ಲಿ ಕಾರಿಗಡ್ಡ ಬಂದು ಬಳಿಕ ಹಿಂಬಾಲಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕುತ್ತಾರು ದಾಟಿದ ಬಳಿಕ ನಿರಂತರ ಎಸ್ಕಾರ್ಟ್ ವಾಹನ ಸೈರನ್ ಬಾರಿಸುತ್ತಿದ್ದರೂ ಅನೀಸ್ ಆಗಾಗ ಎಸ್ಕಾರ್ಟ್ ವಾಹನದ ಹಿಂದೆ ಮುಂದೆ ಅನುಮಾನಾಸ್ಪದವಾಗಿ ಬೈಕ್ ಚಲಾಯಿಸುತ್ತಿದ್ದುದರಿಂದ ಸಂಶಯಗೊಂಡ ಎಸ್ಕಾರ್ಟ್ ಅಧಿಕಾರಿ ಎಎಸ್‌ಐ ಸುಧೀರ್ ತಕ್ಷಣ ಕಂಟ್ರೋಲ್ ರೂಮ್‌ಗೆ ಮಾಹಿತಿ ರವಾನಿಸಿದ್ದರು.
ಕಾರು ಪಂಪ್‌ವೆಲ್ ಬರುತ್ತಿದ್ದಂತೆ ಭದ್ರತೆಗಾಗಿ ಹೈವೇ ಪ್ಯಾಟ್ರೋಲ್ ವಾಹನ ಖಾದರ್ ಕಾರಿನ ಮುಂಭಾಗದಲ್ಲಿ ಸಂಚರಿಸಲು ಆರಂಭಿಸಿತು. ನಂತೂರು ಸರ್ಕಲ್ ಸಮೀಪ ಬರುತ್ತಿದ್ದಂತೆ ಪೊಲೀಸರು ಅನೀಸ್‌ನನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಬಂದ ದಾರಿಯಲ್ಲಿ ಪರಾರಿಯಾಗಿದ್ದ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ಸಂಖ್ಯೆಯನ್ನು ನಮೂದಿಸಿದ್ದ ಪೊಲೀಸರು ರಾತ್ರೋರಾತ್ರಿ ಅನೀಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಹಿಂಬಾಲಿಸಿದ್ದರ ಹಿಂದಿನ ದುರುದ್ದೇಶ ಕಂಡುಬಂದಿಲ್ಲ. ದೇರಳಕಟ್ಟೆಗೆ ಹೋಗಿದ್ದ ಆತ ಇಯರ್‌ಫೋನ್ ಹಾಕಿಕೊಂಡು ನಗರಕ್ಕೆ ಆಗಮಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಗುರುವಾರ ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆಗೆ ಕರೆ ನೀಡಿತ್ತು. ರಾತ್ರೋರಾತ್ರಿ ಯುವಕನನ್ನು ವಶಕ್ಕೆ ಪಡೆದಿದ್ದರಿಂದ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದಾರೆ. ಆದರೆ ಸಂಪೂರ್ಣ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.